ಮಾಹನ್‌ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆ ಫಲಿತಾಂಶ ಶುಕ್ರವಾರ ಪ್ರಕಟವಾಗಿದೆ. 227 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯತಿ ಮೈತ್ರಿಕೂಟ ಸ್ಪಷ್ಟ ಬಹುಮತ ಪಡೆಯುವ ಮೂಲಕ ದೇಶದ ವಾಣಿಜ್ಯ ನಗರಿಯ ಅಧಿಕಾರವನ್ನು ಪಡೆದಿದೆ.
ಚುನಾವಣೆಯಲ್ಲಿ ಭಾರೀ ಕುತೂಹಲ ಮೂಡಿಸಿದ್ದು ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ. ಸುಮಾರು 20 ವರ್ಷಗಳ ಬಳಿಕ ಎಲ್ಲಾ ಅಸಮಾಧಾನ ಮರೆತು ಠಾಕ್ರೆ ಸಹೋದರರು ಒಂದಾಗಿದ್ದರು.
ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಪುನರ್ ಮಿಲನ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆಯಲಿದೆ ಎಂದು ಅಂದಾಜಿಸಲಾಗಿತ್ತು.
ಆದರೆ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಬಣದ ತಂತ್ರದ ಮುಂದೆ ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಮಂಡಿಯೂರಿ, ನೆಲ ಕಚ್ಚಿದ್ದಾರೆ.
ಠಾಕ್ರೆ ಸಹೋದರರು ‘ನಾವು ಒಂದಾಗದಿದ್ದರೆ ವಿನಾಶ’ ಎನ್ನುವ ಘೋಷವಾಕ್ಯದಡಿ ಒಂದಾಗಿ ಚುನಾವಣೆ ಎದುರಿಸಿದ್ದರು.
ಈ ಪುನರ್ ಮಿಲನ ರಾಜಕೀಯ ಸಮೀಕರಣ ಬದಲಾವಣೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ನಿರೀಕ್ಷೆ ಹುಸಿಯಾಗಿದೆ.
ಚುನಾವಣೆಯಲ್ಲಿ ಸೋಲು: ಸದ್ಯದ ಮಾಹಿತಿ ಪ್ರಕಾರ ಬಿಜೆಪಿ 56, ಉದ್ದವ್ ಠಾಕ್ರೆ ನೇತೃತ್ವದ ಯುಬಿಟಿ 44, ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ 22, ಎಐಎಂಐಎಂ 6, ಕಾಂಗ್ರೆಸ್ 16, ಎಸ್ಪಿ 2, ರಾಜ್ ರಾಕ್ರೆಯ ಎಂಎನ್‌ಎಸ್ 4, ಎನ್‌ಸಿಪಿ 2 ಮತ್ತು ಒಬ್ಬರು ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
30 ವರ್ಷದಿಂದ ಶಿವಸೇನೆ ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಪತ್ಯವನ್ನು ಸಾಧಿಸಿತ್ತು. ಆದರೆ ಈ ಬಾರಿ ಆಡಳಿತ ವಿರೋಧಿ ಅಲೆ ಜೋರಾಗಿಯೇ ಇತ್ತು. ಆದ್ದರಿಂದ ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಪುನರ್ ಮಿಲನ ಚುನಾವಣೆ ಮೇಲೆ ಯಾವುದೇ ಪ್ರಭಾವ ಬೀರಿಲ್ಲ ಎಂದು ವಿಶ್ಲೇಷಿಸಲಾಗುತ್ತಿದೆ.
ಬೃಹನ್‌ಮುಂಬೈ ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಹಿಡಿಯಲು ಬೇಕಾದ ಮ್ಯಾಜಿಕ್ ನಂಬರ್ 114. ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ) ಬಣ ಮಹಾಯತಿ ಮೈತ್ರಿಕೂಟ ಸ್ಪಷ್ಟ ಬಹುಮತ ದತ್ತ ಸಾಗಿದ್ದು, ಮುಂಬೈ ಅಧಿಕಾರ ಅವರ ಪಾಲಾಗಲಿದೆ.
ಈ ಮೂಲಕ ಉದ್ದವ್ ಠಾಕ್ರೆ ನೇತೃತ್ವದ ಶಿವಸೇನೆಯ ಅಧಿಕಾರ ಅಂತ್ಯವಾಗಲಿದೆ. ಉದ್ದವ್ ಠಾಕ್ರೆಯ ಶಿವಸೇನೆ, ಕಾಂಗ್ರೆಸ್, ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಮಹಾಘಟಬಂಧನ್ ಮೈತ್ರಿಕೂಟ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿಯೂ ಹೀನಾಯ ಸೋಲು ಕಂಡಿತ್ತು.
ರಾಜ್ ಠಾಕ್ರೆ ಒಂದು ಸೀಟು ಗೆಲ್ಲಲು ಸಹ ವಿಫಲವಾಗಿದ್ದರು. ಬಳಿಕ ಉದ್ದವ್ ಠಾಕ್ರೆ, ರಾಜ್ ಠಾಕ್ರೆ ಒಂದಾಗುವ ಮಾತುಗಳು ಕೇಳಿ ಬಂದಿದ್ದವು.
ಅಂತಿಮವಾಗಿ ಬಿಎಂಎಸ್ ಚುನಾವಣೆಗೆ ಸಹೋದರರು ಒಂದಾಗಿದ್ದರು. ಆದರೆ ಜನರು ಅವರ ಮೇಲೆ ವಿಶ್ವಾಸ ಇಟ್ಟಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿದ್ದಾರೆ.
ವಿಧಾನಸಭೆ ಚುನಾವಣೆ ಬಳಿಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಜೊತೆ ಸೇರಿ ಸರ್ಕಾರ ಮಾಡಿದ್ದ ಉದ್ದವ್ ಠಾಕ್ರೆಗೆ ಮುಂಬೈ ಮಹಾನಗರದ ಜನರು ಪಾಲಿಕೆ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಿದ್ದಾರೆ.
ರಾಜ್ ಠಾಕ್ರೆ ಮತ್ತು ಉದ್ದವ್ ಠಾಕ್ರೆ ಪುನರ್ ಮಿಲನದ ಬಳಿಕ ಬಿಜೆಪಿ, ಶಿವಸೇನೆ ನಾಯಕರ ನಡುವಿನ ವಾಕ್ಸಮರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಬಿಎಂಸಿ ಚುನಾವಣೆ ಈ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಆದರೆ ರಾಜ್ಯದ ಆಡಳಿತ ನಡೆಸುವ ಮಹಾಯತಿ ಮೈತ್ರಿಕೂಟಕ್ಕೆ ಜನರು ಮುಂಬೈ ಪಾಲಿಕೆ ಅಧಿಕಾರವನ್ನು ನೀಡಿದ್ದಾರೆ.




