ಅಮರಾವತಿ: ಆಂಧ್ರಪ್ರದೇಶದ ವಿಜಯನಗರಂ ಸಂಸದ ಮತ್ತು ತೆಲುಗು ದೇಶಂ ಪಕ್ಷದ (TDP) ನಾಯಕ ಕೆ.ಅಪ್ಪಲನಾಯ್ಡು ಅವರು ಮೂರನೇ ಮಗುವನ್ನು ಹೆತ್ತ ಮಹಿಳೆಯರಿಗೆ 50,000 ರೂ. ಅಥವಾ ಹಸುವನ್ನು ನೀಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದು, ಆಂಧ್ರದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಒಂದು ವೇಳೆ ಮಹಿಳೆಯೊಬ್ಬರು ಮೂರನೇ ಮಗುವಿಗೆ ಜನ್ಮ ನೀಡಿದರೆ ಮತ್ತು ಅದು ಹೆಣ್ಣು ಮಗುವಾಗಿದ್ದಲ್ಲಿ ಅವರ ವೈಯಕ್ತಿಕ ಖರ್ಚಿನಿಂದ 50,000 ರೂ.ಗಳನ್ನು ನೀಡುವುದಾಗಿ ತಿಳಿಸಿದರು. ಅಲ್ಲದೆ, ಮೂರನೇ ಮಗು ಗಂಡು ಮಗುವಾಗಿದ್ದಲ್ಲಿ ಹಸುವನ್ನು ನೀಡುವುದಾಗಿಯೂ ಅವರು ಘೋಷಿಸಿದರು.
ಅಪ್ಪಲನಾಯ್ಡು ಅವರ ಈ ಘೋಷಣೆ ರಾಜ್ಯಾದ್ಯಂತ ವೈರಲ್ ಆಗಿದೆ. ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಸೇರಿದಂತೆ ಹಿರಿಯ ಟಿಡಿಪಿ ನಾಯಕರು ಕ್ಷೀಣಿಸುತ್ತಿರುವ ಯುವ ಜನಸಂಖ್ಯೆ ಮತ್ತು ಅದನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ಈ ಹಿಂದೆ ಮಾತನಾಡಿದ್ದರು. ಈ ಹಿನ್ನೆಲೆಯಲ್ಲಿ ಅಪ್ಪಲನಾಯ್ಡು ಅವರ ಘೋಷಣೆ ಮಹತ್ವ ಪಡೆದುಕೊಂಡಿದೆ.