ಬೆಳಗಾವಿ: ಭಾರತ ಕ್ರಿಕೆಟ್ ತಂಡ ಮೂರನೇ ಬಾರಿಗೆ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪ್ರಶಸ್ತಿ ಗೆಲ್ಲುತ್ತಿದ್ದಂತೆಯೇ ನಗರಾದ್ಯಂತ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.
ಭಾರತದ ಗೆಲುವಾಗಿ ಕಾತುರದಿಂದ ಕಾಯ್ದುಕೊಂಡು ಟಿವಿ ವೀಕ್ಷಿಸುತ್ತಿದ್ದ ಕ್ರಿಕೆಟ್ ಅಭಿಮಾನಿಗಳು ರೋಹಿತ್ ಬಳಗ 4 ವಿಕೆಟ್ ಗಳಿಂದ ನ್ಯೂಜಿಲೆಂಡ್ ವಿರುದ್ದ ಗೆದ್ದು ಪ್ರಶಸ್ತಿ ಗಳಿಸಿದ್ದಕ್ಕೆ ತೀವ್ರ ಸಂತಸ ವ್ಯಕ್ತಪಡಿಸಿದರು. ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮ ವ್ಯಕ್ತಪಡಿಸಿದ್ದಂತೆ ನಗರದ ವಿವಿಧೆಡೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಕೆಲವೆಡೆ ಅಭಿಮಾನಿಗಳು ಸಿಹಿ ಹಂಚಿ, ರೋಹಿತ್ ಪಡೆಗೆ ಮತ್ತಷ್ಟು ಬಲ ಸಿಗಲೆಂದು ಹಾರೈಸಿದರು.




