ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾತ್ರಿಯಿಡಿ ಸುರಿದ ಧಾರಾಕಾರ ಮಳೆಯಿಂದಾಗಿ ಅವಾಂತರಗಳು ಸೃಷ್ಟಿಯಾಗಿವೆ. ತಗ್ಗು ಪ್ರದೇಶದ ಮನೆಗಳು, ರಸ್ತೆಗಳು, ರೈಲ್ವೆ ಅಂಡರ್ ಪಾಸ್ ಗಳು, ಮಾರುಕಟ್ಟೆಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಜನರ ಬದುಕು ದುಸ್ತರವಾಗಿದೆ.
ಬೆಂಗಳೂರಿನಲ್ಲಿ ಭಾರಿ ಮಳೆಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡಿ ಜನರು ನಿದ್ದೆಯಿಲ್ಲದೇ ಪರದಾಡಿದ್ದಾರೆ. ಓಕುಳಿಪುರಂ ನಲ್ಲಿ ಅಂಡರ್ ಪಾಸ್ ಗೆ ನೀರು ನುಗ್ಗಿ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಇನ್ನೊಂದೆಡೆ ನೀರು ನಿಂತಿದ್ದ ರಸ್ತೆಯಲ್ಲಿಯೇ ಆಂಬುಲೆನ್ಸ್ ಒಂದು ಸಿಲುಕಿಕೊಂಡಿತ್ತು. ಆಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದ ಕಾರಣ ನೀರಿನ ಪ್ರಮಾಣ ತಗ್ಗಿದ ಬಳಿಕ ಆಂಬುಲೆನ್ಸ್ ಸಂಚರಿಸಿದೆ.
ಜಕ್ಕೂರಿನಲ್ಲಿ ರೈಲ್ವೆ ಅಂಡರ್ ಪಾಸ್ ಸಂಪೂರ್ಣ ಮುಳುಗಡೆಯಾಗಿದೆ. ಚಿಕ್ಕಪೇಟೆ ಮೆಟ್ರೋ ಸ್ಟೇಷನ್ ಮುಂಭಾಗದ ರಸ್ತೆಗಳು ಮುಳುಗಡೆಯಾಗಿವೆ. ಸುಮಾರು ಎರಡು ಅಡಿಯಷ್ಟು ರಸ್ತೆಯಲ್ಲಿ ನೀರು ನಿಂತಿದೆ.
ಕೆ.ಆರ್.ಮಾರುಕಟ್ಟೆಯ ರಸ್ತೆಗಳಂತು ಕೆಸರುಮಯವಾಗಿದ್ದು, ವ್ಯಾಪಾರ-ವಹಿವಾಟು ಅಸಾಧ್ಯವಾಗಿದೆ. ವರುಣಾರ್ಭಟಕ್ಕೆ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ರಾಜಧಾನಿಯಲ್ಲಿನ ಹಲವು ಬಡಾವಣೆಗಳಲ್ಲಿ ನೀರು ನಿಂತಿದ್ದು, ಜನರ ಓಡಾಟಕ್ಕೆ ಸಮಸ್ಯೆಯಾಗಿದೆ.
ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಪಾರ್ಟ್ ಮೆಂಟ್ ಬೇಸ್ ಮೆಂಟ್ ಗಳಿಗೆ ನೀರು ನುಗ್ಗಿ ಜಲಾವೃತವಾಗಿವೆ.ಬೆಂಗಳೂರಿನಲ್ಲಿ ಇಂದು ಕೂಡ ಭಾರಿ ಮಳೆಯಾಗುವ ಸಾಧ್ಯತೆ ದಟ್ಟವಾಗಿದ್ದು, ರಾಜಧಾನಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.