ತುರುವೇಕೆರೆ : ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಹಿಂದಿರುಗಿದ ಯೋಧ ಬಿ.ಹೆಚ್.ಧರಣೇಂದ್ರ ಅವರನ್ನು ತಾಲೂಕಿನ ಬಿಗನೇನಹಳ್ಳಿ ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿದರು.

ತಾಲೂಕಿನ ಬಿಗನೇನಹಳ್ಳಿ ಗ್ರಾಮದ ಹುಚ್ಚೇಗೌಡ, ಮರಿಯಮ್ಮ ದಂಪತಿಗಳ ಪುತ್ರ ಬಿ.ಹೆಚ್.ಧರಣೇಂಧ್ರ 2002 ರಲ್ಲಿ ಭಾರತೀಯ ಸೇನಯಲ್ಲಿ ಸೈನಿಕನಾಗಿ ಕೆಲಸಕ್ಕೆ ಸೇರಿದ್ದರು. ಸುಮಾರು 24 ವರ್ಷಗಳ ಸುದೀರ್ಘ ಸೇವೆಯ ನಂತರ ಸೇವೆಯಿಂದ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ತೆರಳಿದ ಯೋಧ ಬಿ.ಹೆಚ್.ಧರಣೇಂದ್ರರನ್ನು ಗ್ರಾಮಸ್ಥರು, ಮಹಿಳೆಯರು, ಯುವಕರು ಪುಷ್ಪಾಹಾರ ಹಾಕಿ ಸ್ವಾಗತಿಸಿದರು. ದಬ್ಬೇಘಟ್ಟ ಗ್ರಾಮದಿಂದ ತೆರೆದ ವಾಹನದಲ್ಲಿ ಯೋಧರನ್ನು ನೂರಾರು ಬೈಕ್ ಗಳ ಮೆರವಣಿಗೆಯಲ್ಲಿ ಕರೆತಂದ ಯುವಕರು ದಾರಿಯುದ್ದಕ್ಕೂ ಜೈಹಿಂದ್, ಜೈ ಜವಾನ್, ಜೈ ಕಿಸಾನ್, ಭಾರತ್ ಮಾತಾ ಕೀ ಜೈ ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸಿದರು. ಗ್ರಾಮ ದೇವತೆ ಶ್ರೀ ಬೇವಿನಮರದಮ್ಮ ತಾಯಿಗೆ ಪೂಜೆ ಸಲ್ಲಿಸಲಾಯಿತು. ಬಿಗನೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬ್ಯಾಂಡ್ ಸೆಟ್ ಬಾರಿಸುವ ಮೂಲಕ ಯೋಧನಿಗೆ ಗೌರವ ಸ್ವಾಗತ ಕೋರಿದರು. ಯುವಕರು ಪಟಾಕಿ ಸಿಡಿಸಿ ಸಿಹಿ ಹಂಚಿ ಭಾರತದ ರಾಷ್ಟ್ರಧ್ವಜವನ್ನು ಹಿಡಿದು ಕುಪ್ಪಳಿಸಿದರು.

ಸ್ಪರ್ಧಾ ಚೈತ್ರ ಸಂಪಾದಕ ಬಿ.ಎಸ್.ವಸಂತಕುಮಾರ್ ಮಾತನಾಡಿ, ನಾವೆಲ್ಲಾ ನೆಮ್ಮದಿಯ ಬದುಕು ಸಾಗಿಸುತ್ತಿದ್ದೇವೆ, ನೆಮ್ಮದಿಯಾಗಿ ನಿದ್ದೆ ಮಾಡುತ್ತಿರಲು ಕಾರಣ ಭಾರತೀಯ ಸೈನಿಕರು. ನಮ್ಮೆಲ್ಲರ ಹೋರಾಟ ನಮ್ಮ ಬದುಕಿಗಾಗಿ, ನಮ್ಮ ಕುಟುಂಬಕ್ಕಾಗಿ ಆದರೆ ಸೈನಿಕರ ಹೋರಾಟ ದೇಶಕ್ಕಾಗಿ, ದೇಶದ ನಾಗರೀಕರ ರಕ್ಷಣೆಗಾಗಿ. ಯಾವುದಾದರೂ ಓರ್ವ ವ್ಯಕ್ತಿ ದೇಶಕ್ಕಾಗಿ ಪ್ರಾಣ ಅರ್ಪಣೆಗೂ ಸಿದ್ದ ಎಂಬುದಿದ್ದರೆ ಅದು ಸೈನಿಕರು ಮಾತ್ರ. ಯಾರಲ್ಲೂ ಅಂತಹ ತ್ಯಾಗದ ಮನೋಭಾವ ಬರುವುದಿಲ್ಲ. ಅಂತಹ ತ್ಯಾಗ, ದೇಶಪ್ರೇಮ, ಶಿಸ್ತುಬದ್ಧ ಕಾರ್ಯ ಸೈನಿಕರಲ್ಲಿ ಮಾತ್ರ ಕಾಣಬಹುದಾಗಿದೆ ಎಂದರು.

ಸೈನ್ಯ ಸೇರಿದವರ ಬದುಕು ಅನಿಶ್ಚಿತವಾದುದು. ದೇಶ ರಕ್ಷಣೆ, ಯುದ್ದ, ಹೋರಾಟದಲ್ಲೇ ಗಡಿಗಳಲ್ಲಿ ಕಷ್ಟದ ಬದುಕನ್ನು ನಮಗಾಗಿ ಎದುರಿಸುತ್ತಿರುತ್ತಾರೆ, ಅವರು ತಮ್ಮ ಸೇವೆಯನ್ನು ಪೂರೈಸಿ ಜೀವಂತವಾಗಿ ಮರಳಿ ಬರುವುದು ಬಹಳ ಕಷ್ಟ. ಅಂತಹುದರಲ್ಲಿ ನಿಮ್ಮೂರಿನ ಯೋಧ 24 ವರ್ಷಗಳ ಕಾಲ ಸೇನೆಯಲ್ಲಿ ದೇಶಸೇವೆ ಸಲ್ಲಿಸಿ ಮರಳಿ ಸ್ವಗ್ರಾಮಕ್ಕೆ ಬಂದಿರುವುದು ಸಂತೋಷದ ವಿಷಯವಾಗಿದೆ ಎಂದ ಅವರು, ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಯುದ್ಧ ಆವರಿಸಿದೆ, ಯುದ್ದದ ಭೀತಿಯಲ್ಲಿ ಅಲ್ಲಿನ ಜನತೆ ಬದುಕುತ್ತಿದ್ದಾರೆ. ಆದರೆ ನಮ್ಮ ಸೈನಿಕರ ಧೈರ್ಯ, ದೇಶದ ರಾಜತಾಂತ್ರಿಕತೆಯ ಕಾರಣದಿಂದ ಭಾರತೀಯರಾದ ನಾವು ನೆಮ್ಮದಿಯ ಬದುಕನ್ನು ಸಾಗಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ದೇಶಸೇವೆ ಎಂಬುದು ಹೆಮ್ಮೆಯ ಸಂಗತಿಯಾಗಿದ್ದು, ಯುವ ಸಮೂಹ ಸೇನೆ ಸೇರಲು ಸ್ವಯಂಪ್ರೇರಿತರಾಗಿ ಮುಂದೆ ಬರಬೇಕೆಂದರು.
ಬಿಗನೇನಹಳ್ಳಿ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಬಿ.ಹೆಚ್.ಧರಣೇಂದ್ರ, ಸ್ವಗ್ರಾಮದಲ್ಲಿ ಇಂತಹ ಸ್ವಾಗತ, ಸನ್ಮಾನ ಸ್ವೀಕರಿಸುತ್ತಿರುವುದು ಬಹಳ ಸಂತೋಷ ತಂದಿದೆ. ದೇಶಸೇವೆ ಮಾಡಬೇಕೆನ್ನುವುದು ಪ್ರತಿಯೊಬ್ಬರ ಕನಸಾಗಬೇಕು. ದೇಶಸೇವೆ ಮಾಡುವ ಸೌಭಾಗ್ಯ ಸಿಕ್ಕಿದ್ದು ನನ್ನ ಸೌಭಾಗ್ಯ. ಹೆತ್ತವರ ಆರ್ಶೀವಾದ, ಗ್ರಾಮದ ಜನರ ಅಭಿಮಾನ, ಪ್ರೀತಿ ನನ್ನನ್ನು ಮರಳಿ ಗ್ರಾಮಕ್ಕೆ ಹಿಂದಿರುಗುವಂತೆ ಮಾಡಿದೆ ಎಂದರು.
ಈ ಸಂದರ್ಭದಲ್ಲಿ ಪಿಎಸಿಎಸ್ ಅಧ್ಯಕ್ಷ ಕೆಂಪೇಗೌಡ, ಪಿಎಸಿಎಸ್ ನಿರ್ದೇಶಕ ಆದಿಶೇಷ, ಮಾಜಿ ಅಧ್ಯಕ್ಷ ರವೀಂದ್ರ ಕುಮಾರ್, ಉಪನ್ಯಾಸಕ ನವೀನ್ ಎಸ್.ಗೌಡ, ಲಕ್ಷ್ಮಣ್, ಪರಮೇಶ್, ನಿವೃತ್ತ ಯೋಧ ಪುಟ್ಟಸ್ವಾಮಯ್ಯ, ಮುದ್ದನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಚಂದ್ರಶೇಖರ್, ಕಿರುತೆರೆ ಕಲಾವಿದ ಮಂಜಣ್ಣ, ಮುಖಂಡರಾದ ರಮೇಶ್, ರಾಜ್ ಕುಮಾರ್, ಜಗದೀಶ್, ಸರ್ವೆ ರಂಗಪ್ಪ, ಮಹೇಶ್, ಶಾಲೆಯ ಶಿಕ್ಷಕರಾದ ಚೇತನ, ಸುರೇಶ್, ರವಿಕುಮಾರ್, ನಿವೃತ್ತ ಮುಖ್ಯಶಿಕ್ಷಕ ನಾಗರಾಜ್ ಸೇರಿದಂತೆ ನೂರಾರು ಮಂದಿ ಮಹಿಳೆಯರು, ಯುವಕರು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




