Ad imageAd image

ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಿಲ್ಲ ಎಂದು ಅರೆಮಲ್ಲೇನಹಳ್ಳಿ ಗ್ರಾಪಂ ಆವರಣದಲ್ಲಿ ದನಕರುಗಳನ್ನು ಕಟ್ಟಿ ಪ್ರತಿಭಟಿಸಿದ ಗ್ರಾಮಸ್ಥರು

Bharath Vaibhav
ಜಾನುವಾರುಗಳಿಗೆ ನೀರಿನ ತೊಟ್ಟಿ ನಿರ್ಮಿಸಲಿಲ್ಲ ಎಂದು ಅರೆಮಲ್ಲೇನಹಳ್ಳಿ ಗ್ರಾಪಂ ಆವರಣದಲ್ಲಿ ದನಕರುಗಳನ್ನು ಕಟ್ಟಿ ಪ್ರತಿಭಟಿಸಿದ ಗ್ರಾಮಸ್ಥರು
WhatsApp Group Join Now
Telegram Group Join Now

ತುರುವೇಕೆರೆ : ತಾಲ್ಲೂಕಿನ ಅರೆಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯು ಜಾನುವಾರುಗಳಿಗೆ ನೀರು ಕುಡಿಯಲು ತೊಟ್ಟಿ ನಿರ್ಮಿಸಿಕೊಡಲಿಲ್ಲವೆಂದು ಆರೋಪಿಸಿ ಗ್ರಾಮಸ್ಥರು ಗ್ರಾಪಂ ಆವರಣದೊಳಗೆ ದನಕರು, ಜಾನುವಾರುಗಳನ್ನು ಕಟ್ಟಿ ಪಂಚಾಯ್ತಿ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ಘಟನೆ ಇಂದು ನಡೆದಿದೆ.

ಈ ಬಗ್ಗೆ ಗ್ರಾಮಸ್ಥ ಎ.ಆರ್. ದಯಾನಂದ್ ಮಾತನಾಡಿ, ಅರೆಮಲ್ಲೇನಹಳ್ಳಿ ಗ್ರಾಮದಿಂದ ಶಂಕರಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿಯೇ ಗ್ರಾಮದ ಸಾಕಷ್ಟು ಮಂದಿಯ ತೋಟಗಳಿವೆ. ಗ್ರಾಮಸ್ಥರು ಪ್ರತಿನಿತ್ಯ ತಮ್ಮ ತೋಟಗಳಿಗೆ ಜಾನುವಾರುಗಳನ್ನು ಮೇಯಿಸಲು ಕರೆದೊಯ್ಯುತ್ತಾರೆ. ಅವುಗಳಿಗೆ ಕುಡಿಯಲು ಹತ್ತಿರದಲ್ಲಿ ಯಾವುದೇ ಕಟ್ಟೆಯಾಗಲೀ, ತೊಟ್ಟಿಯಾಗಲೀ ಇಲ್ಲ. ಗ್ರಾಮದಿಂದ ಸುಮಾರು 400 ಮೀಟರ್ ದೂರದಲ್ಲಿ ಈ ರಸ್ತೆಯಲ್ಲಿ ಕಟ್ಟೆ ಇದೆ. ಮಾರ್ಗ ಮಧ್ಯೆ ಜಾನುವಾರುಗಳಿಗೆ ಕುಡಿಯುವ ನೀರಿನ ತೊಟ್ಟಿ ನಿರ್ಮಿಸಿಕೊಡುವಂತೆ ಗ್ರಾಪಂಗೆ 2021 ರಿಂದ ಅರ್ಜಿ ಸಲ್ಲಿಸಿ ಮನವಿ ಮಾಡಲಾಗಿತ್ತು. ಅಂದಿನಿಂದ ಈವರೆಗೆ ಗ್ರಾಪಂ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಮತ್ತೆ 3 ತಿಂಗಳ ಹಿಂದೆ ಮತ್ತೊಮ್ಮೆ ಅರ್ಜಿ ಸಲ್ಲಿಸಿ ನೀರಿನ ತೊಟ್ಟಿ ನಿರ್ಮಿಸಿಕೊಡದಿದ್ದರೆ ಪಂಚಾಯ್ತಿ ಆವರಣದಲ್ಲಿ ಜಾನುವಾರುಗಳನ್ನು ಕಟ್ಟುವ ಬಗ್ಗೆಯೂ ತಿಳಿಸಲಾಗಿತ್ತು. ಆದರೂ ಪಂಚಾಯ್ತಿ ಕ್ರಮವಹಿಸಲಿಲ್ಲ. ಈ ಕಾರಣದಿಂದ ಪಂಚಾಯ್ತಿಯ ನಿರ್ಲಕ್ಷ್ಯ ಖಂಡಿಸಿ ಈ ದಿನ ಜಾನುವಾರುಗಳನ್ನು ಪಂಚಾಯ್ತಿ ಆವರಣದಲ್ಲಿ ಕಟ್ಟಿ ಪ್ರತಿಭಟನೆ ನಡೆಸಲಾಗಿದೆ. ಪಂಚಾಯ್ತಿಯ ಧೋರಣೆ ಬಗ್ಗೆ ತಾಪಂ ಕಾರ್ಯನಿರ್ವಹಣಾಧಿಕಾರಿ ಶಿವರಾಜಯ್ಯ ಹಾಗೂ ತುಮಕೂರು ಜಿಲ್ಲಾ ಮಟ್ಟದ ಅಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹೇಮಚಂದ್ರ ಮಾತನಾಡಿ, ಅರೆಮಲ್ಲೇನಹಳ್ಳಿ ಗ್ರಾಮದ ಸುತ್ತಲೂ ಕಟ್ಟೆಗಳಿದ್ದು, ಎಲ್ಲೆಡೆ ನೀರಿದೆ. ಅರ್ಜಿದಾರರು ತೊಟ್ಟಿ ಕೇಳಿರುವ ಸುಮಾರು 100 ಮೀಟರ್ ಅಂತರದಲ್ಲಿ ಕಟ್ಟೆ ಇದೆ. ಈ ಸಂದರ್ಭದಲ್ಲಿ ನೀರಿನ ತೊಟ್ಟಿಯ ಅಗತ್ಯವಿಲ್ಲದ ಕಾರಣ ಗ್ರಾಮಸ್ಥರ ಅಹವಾಲನ್ನು ಪರಿಗಣಿಸಿಲ್ಲ. ಮುಂದಿನ ಬೇಸಿಗೆಯಲ್ಲಿ ಅವಶ್ಯಕತೆ ಬಂದಲ್ಲಿ ಖಂಡಿತ ನೀರಿನ ತೊಟ್ಟಿ ನಿರ್ಮಿಸಲಾಗುವುದು ಎಂದರು.

ಗ್ರಾಪಂ ಪಿಡಿಒ ಉಮೇಶ್ ಮಾತನಾಡಿ, ಗ್ರಾಮದಲ್ಲಿ ಉತ್ತಮವಾದ ಮಳೆಯಾಗಿರುವ ಕಾರಣ ಕೆರೆಕಟ್ಟೆಗಳಲ್ಲಿ ಸಾಕಷ್ಟು ನೀರಿದೆ. ಹಳೇ ಟ್ಯಾಂಕುಗಳಿಗೂ ಸಹ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಲಾಗಿದೆ. ಮನೆಗಳು ಇರುವ ಸಾಲಿನಲ್ಲಿ ಕೆಲವರು 5-10 ಹಸುಗಳನ್ನು ಸಾಕಿಕೊಂಡಿದ್ದಾರೆ. ವೈಯಕ್ತಿಕವಾಗಿ ಅವರ ಮನೆ ಬಳಿ ಇರುವ ತೊಟ್ಟಿಗೆ ನೀರು ಸರಬರಾಜು ಮಾಡುವಂತೆ ಕೋರಿದ್ದಾರೆ. ಈ ಬಗ್ಗೆ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಂದಿದ್ದು, ಸರ್ಕಾರ ಬರ ಘೋಷಿಸಿಲ್ಲ, ಸಾಕಷ್ಟು ಮಳೆಯಾಗಿದ್ದು ಕೆರೆಕಟ್ಟೆಗಳಲ್ಲಿ ನೀರಿದೆ. ಮುಂದಿನ ಬೇಸಿಗೆ ವೇಳೆ ನೀರಿನ ಸಮಸ್ಯೆ ಉಂಟಾದರೆ ಅನುಮೋದನೆ ಪಡೆದು ಕ್ರಮ ಕೈಗೊಳ್ಳೋಣ ಎಂದು ಸಭೆ ತೀರ್ಮಾನಿಸಿದೆ ಎಂದರು.

ಗ್ರಾಪಂ ಸಾಮಾನ್ಯ ಸಭೆಯಲ್ಲಿ ವಿಷಯ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಬಗ್ಗೆ ಪಿಡಿಒ ಉಮೇಶ್ ಭರವಸೆ ನಂತರ ಪ್ರತಿಭಟನೆ ಕೈಬಿಡಲಾಯಿತು. ಈ ಸಂದರ್ಭದಲ್ಲಿ ಮುಖಂಡರಾದ ಎ.ಆರ್.ಕೃಷ್ಣೇಗೌಡ, ಲಕ್ಷ್ಮಣಗೌಡ, ರಂಗನಾಥ್, ಶಿವರಾಜ್, ಲೋಕೇಶ್, ಜೆ.ರಂಗಸ್ವಾಮಿ ಮುಂತಾದವರಿದ್ದರು.

ವರದಿ : ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!