ಬೆಂಗಳೂರು: ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ವಿರುದ್ಧ ವಾರಂಟ್ ಜಾರಿಯಾಗಿದೆ.
ಹಾಗಾಗಿ ಅವರು ಬೇಗ ಬಂದ್ರೆ ಒಳ್ಳೆಯದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಜಿ.ಪರಮೇಶ್ವರ್, ಯಡಿಯೂರಪ್ಪ ದೆಹಲಿಯಲ್ಲಿದ್ದಾರೆ ಎನ್ನುತ್ತಿದ್ದಾರೆ.
ಸೋಮವಾರ ಬರೋದಾಗಿ ಅವರು ಹೇಳಿದ್ದಾರೆ. ಯಡಿಯೂರಪ್ಪ ಆದಷ್ಟು ಬೇಗ ಬಂದ್ರೆ ಒಳ್ಳೆಯದು. ಇಲ್ಲದಿದ್ದರೆ ಪೊಲೀಸರು ಅವರನ್ನು ಕರೆದುಕೊಂಡು ಬರುತ್ತಾರೆ ಎಂದು ಹೇಳಿದರು.
ಪ್ರಕರಣ ಸಂಬಂಧ ಪೊಲೀಸರು ಯಡಿಯೂರಪ್ಪರಿಂದ ಮಾಹಿತಿ ಪಡೆದುಕೊಳ್ಳುತ್ತಾರೆ. ಬಳಿಕವೇ ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದರು.
ಬಿಜೆಪಿಯವರು ಸೇಡಿನ ರಾಜಕಾರಣ ಎಂದು ಆರೋಪಿಸುತ್ತಿದ್ದಾರೆ. ಸುಮ್ಮನೇ ಕಥೆ ಕಟ್ಟುತ್ತಿದ್ದಾರೆ. ಇದರಲ್ಲಿ ಯಾವ ರಾಜಕಾರಣವೂ ಇಲ್ಲ. ಈ ಪ್ರಕರಣದಲ್ಲಿ ರಾಹುಲ್ ಗಾಂಧಿ ಏಕೆ ಭಾಗಿಯಾಗುತ್ತಾರೆ? ರಾಹುಲ್ ಗಾಂಧಿ ಭಾಗಿಯಾಗಿಲ್ಲ ಎಂದು ಹೇಳಿದರು.