ವಿದ್ಯುತ್ ತಗುಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಪಕ್ಷಿಯನ್ನು ಉಳಿಸಲು ಹೋಗಿ ತಾನೇ ಪ್ರಾಣ ಕಳೆದುಕೊಂಡ ಬಾಲಕ
ಮೊಳಕಾಲ್ಮುರು: ಪಾರಿವಾಳವೊಂದು ಆಕಸ್ಮಿಕವಾಗಿ ವಿದ್ಯುತ್ ಕಂಬದ ಮೇಲಿನ ತಂತಿಗೆ ಸಿಲುಕಿ ಜೀವನ್ಮರಣ ಹೋರಾಟ ನಡೆಸುತ್ತಿರುವುದನ್ನು ಕಂಡ ಬಾಲಕನು ಪಾರಿವಾಳವನ್ನು ರಕ್ಷಿಸಲು ಹೋಗಿ ತಾನೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ನಡೆದಿದೆ.
ಮೊಳಕಾಲ್ಮುರು ತಾಲೂಕಿನ ಸಂತೇಗುಡ್ಡ ಗ್ರಾಪಂ ವ್ಯಾಪ್ತಿಯ ಹನುಮಾಪುರ ಗ್ರಾಮದಲ್ಲಿ ಮಂಗಳವಾರ ಸಂಜೆ 6 ಗಂಟೆಗೆ ಗ್ರಾಮದಲ್ಲಿನ ವಿದ್ಯುತ್ ಕಂಬದ ಮೇಲಿನ ವಿದ್ಯುತ್ ತಂತಿಗೆ ಪಾರಿವಾಳ ಸಿಲುಕಿ ಒದ್ದಾಡುತ್ತಿರುವಾಗ,ಪಾರಿವಾಳವನ್ನು ರಕ್ಷಣೆ ಮಾಡಲೆಂದು ಗ್ರಾಮದ ರಾಮಚಂದ್ರ (12) ಬಾಲಕನು ವಿದ್ಯುತ್ ಕಂಬ ಮೇಲೇರಿ ಪಾರಿವಾಳವನ್ನು ರಕ್ಷಿಸಲು ಹೋಗಿ ತಾನೇ ಬಲಿಯಾಗಿದ್ದಾನೆ. ತಂತಿಯಲ್ಲಿ ಸಿಲುಕಿದ ಪಾರಿವಾಳವನ್ನು ರಕ್ಷಿಸುವಾಗ ಬಾಲಕನಿಗೆ ವಿದ್ಯುತ್ ಸ್ಪರ್ಶಸಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕಣ್ಣೆದುರಿಗೆ ಮಗನ ಶವ ವಿದ್ಯುತ್ ಕಂಬದ ಮೇಲೆ ನೇತಾಡುತ್ತಿರುವುದನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲುಮಟ್ಟಿದೆ, ಪ್ರಾಣ ಕಳೆದುಕೊಳ್ಳುತ್ತಿದ್ದ ಪಕ್ಷಿಯನ್ನು ಉಳಿಸಲು ಹೋಗಿ ತಾನೇ ಪ್ರಾಣ ಕಳೆದುಕೊಂಡ ಮಾನವೀಯತೆ ಮೆರೆದು ಸಾವನ್ನಪ್ಪಿರುವ 6ನೇ ತರಗತಿ ಓದುತ್ತಿದ್ದ ರಾಮಚಂದ್ರನ ಸಾವಿಗೆ ಇಡೀ ಗ್ರಾಮವೇ ಕಂಬನಿ ಮಿಡಿದಿದೆ.
ಘಟನಾ ಸ್ಥಳಕ್ಕೆ ರಾಂಪುರ ಪಿಎಸ್ಐ ಮಹೇಶ್ ಹೊಸಪೇಟೆ ಭೇಟಿ ನೀಡಿ ಪರಿಶೀಲಿಸಿದರು.
ವರದಿ: ಗಂಗಾಧರ