ಚಂಡೀಗಢ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಆತನ ಪತ್ನಿಯೇ ಕೊಂದು ನಂತರ ಶವವನ್ನು ಚರಂಡಿಗೆ ಎಸೆದಿರುವಂತಹ ಘಟನೆ ಹರಿಯಾಣದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಘಟನೆ ಮಾರ್ಚ್‌ನಲ್ಲಿ ನಡೆದಿದೆ. ಆರೋಪಿ ಮಹಿಳೆ ರವೀನಾ ಯೂಟ್ಯೂಬರ್ ಆಗಿದ್ದು, ಆಕೆ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಂದು, ಶವವನ್ನು ಬೈಕ್‌ನಲ್ಲಿ ಸಾಗಿಸಿ ನಗರದ ಹೊರಗಿನ ಚರಂಡಿಗೆ ಎಸೆದಿದ್ದರು ಎಂದು ತಿಳಿದು ಬಂದಿದೆ.
ವರದಿಗಳ ಪ್ರಕಾರ ರವೀನಾ ಪತಿ ಪ್ರವೀಣ್ ಮದ್ಯವ್ಯಸನಿಯಾಗಿದ್ದು, ಇಬ್ಬರ ನಡುವೆ ಆಗಾಗ ಜಗಳಗಳಾಗುತ್ತಿತ್ತು. ದಂಪತಿ 2017ರಲ್ಲಿ ಮದುವೆಯಾಗಿದ್ದು, ಆರು ವರ್ಷದ ಮಗನಿದ್ದಾನೆ.
ಕಳೆದ ಎರಡು ವರ್ಷಗಳಿಂದ ರವೀನಾಗೆ ಇನ್ಸ್ಟಾಗ್ರಾಮ್‌ನಲ್ಲಿ ಹಿಸಾರ್‌ನ ಯೂಟ್ಯೂಬರ್ ಸುರೇಶ್ ಎಂಬುವವನ ಪರಿಚಯವಾಗಿದ್ದು, ಇಬ್ಬರ ನಡುವೆ ಪ್ರೇಮ ಸಂಬಂಧ ಬೆಳೆದಿದೆ.
ಮಾರ್ಚ್ 25 ರಂದು ಪ್ರವೀಣ್ ಮನೆಗೆ ಬಂದಾಗ ರವೀನಾ ಹಾಗೂ ಸುರೇಶ್ ಆಕ್ಷೇಪಾರ್ಹ ಭಂಗಿಯಲ್ಲಿ ಇದ್ದುದನ್ನು ನೋಡಿದ ಬಳಿಕ ಜಗಳ ಪ್ರಾರಂಭವಾಗಿದೆ. ಅದೇ ರಾತ್ರಿ ಇಬ್ಬರು ಸೇರಿ ಪ್ರವೀಣ್ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಬೈಕ್ ಮೂಲಕ ಸಾಗಿಸಿ ಚರಂಡಿಗೆಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.