ಹಾವೇರಿ: ಪ್ರೀತಿಸಿದ ಹುಡುಗಿಯನ್ನು ಓಡಿಸಿಕೊಂಡು ಹೋಗಿ ಮದುವೆಯಾಗಲು ಕಾರಿನಲ್ಲಿ ತೆರಳುತ್ತಿದಾಗ ಭೀಕರ ಅಪಘಾತ ಸಂಭವಿಸಿದ್ದು, ಯುವಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಹಾಸನದಲ್ಲಿ ನಡೆದಿದೆ.
ಯುವಕ ಇರ್ಫಾನ್ ಸೇರಿದಂತೆ ಮೂವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಪಘಾತವಾಗುತ್ತಿದ್ದಂತೆ ಯುವತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾಳೆ.
ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಲು ಇರ್ಫಾನ್ ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದ. ಮಾರ್ಗ ಮಧ್ಯೆ ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಆಸ್ಪತ್ರೆಗೆ ದಾಅಖಲಾಗಿದ್ದಾರೆ. ಯುವತಿ ಮಾತ್ರ ಅಲ್ಲಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡಿದ್ದಾಳೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ಕಾಅರು ಪಲ್ಟಿಯಾಗಿ ಈ ಘಟನೆ ನಡೆದಿದೆ. ಗಾಯಾಳು ಯುವಕ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವೆ ಪ್ರೀತಿ ಚಿಗುರಿದ್ದು, ಮದುವೆಯಾಗಲು ನಿರ್ಧರಿಸಿ ಕಾರಿನಲ್ಲಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಯುವತಿ ಇತ್ತೀಚೆಗೆ ಜಾತ್ರೆಗಾಗಿ ಹಿರೇಕೆರೂರಿನ ತನ್ನೂರಿಗೆ ಬಂದಿದ್ದಳು. ಆಕೆಯನ್ನು ಅಲ್ಲಿಂದ ಕರೆದುಕೊಂಡು ಹೋಗಿ ಮದುವೆಯಾಗಲು ಇರ್ಫಾನ್ ಪ್ಲಾನ್ ಮಾಡಿದ್ದ. ಇದಕ್ಕಾಗಿ ತನ್ನ ಸ್ನೇಹಿತರಾದ ಚಂದ್ರು ಮತ್ತು ಗುರುರಾಜ್ ಅವರ ಜೊತೆ ಬಾಡಿಗೆ ಕಾರಿನಲ್ಲಿ ಊರಿಗೆ ಬಂದಿದ್ದ ಇರ್ಫಾನ್, ಯುವತಿಯನ್ನು ಕರೆದುಕೊಂಡು ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದ. ಯುವತಿಯ ಪೋಷಕರು ಬೆನ್ನಟ್ಟಬಹುದು ಎಂಬ ಭಯದಲ್ಲಿ ಯುವಕರು ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಚನ್ನಹಳ್ಳಿ ತಾಂಡಾ ಬಳಿ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.
ಅಪಘಾತದ ಭೀಕರತೆಗೆ ಕಾರು ಸಂಪೂರ್ಣ ನುಜ್ಜುನುಜ್ಜಾಗಿದ್ದು, ಇರ್ಫಾನ್ ಹಾಗೂ ಆತನ ಇಬ್ಬರು ಸ್ನೇಹಿತರಿಗೆ ಗಂಭೀರ ಗಾಯಗಳಾಗಿವೆ. ಕಾರಿನ ಹಿಂಬದಿಯ ಸೀಟಿನಲ್ಲಿದ್ದ ಯುವತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಅಪಘಾತವಾಗುತ್ತಿದ್ದಂತೆ ಸ್ಥಳೀಯರು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಜನರ ಗುಂಪು ಸೇರುವುದನ್ನು ಕಂಡು ಯುವತಿ ತನ್ನ ಪ್ರಿಯಕರನನ್ನು ಬಿಟ್ಟು ಬೆಂಗಳೂರು ಬಸ್ ಹತ್ತಿದ್ದಾಳೆ. ಹಿರೇಕೆರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.




