ತುರುವೇಕೆರೆ: ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯಡಿ ಪಡಿತರ ಚೀಟಿದಾರರಿಗೆ 10 ಕೆ.ಜಿ. ಅಕ್ಕಿ ಘೋಷಿಸಿತ್ತು. ಈ ಪೈಕಿ 5 ಕೆ.ಜಿ. ಅಕ್ಕಿ ಬದಲು ಡಿಬಿಟಿ ಮೂಲಕ 170 ರೂಗಳನ್ನು ಖಾತೆಗೆ ಜಮಾ ಮಾಡುತ್ತಿತ್ತು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿಂದ ಡಿಬಿಟಿ ಬದಲಾಗಿ 5 ಕೆ.ಜಿ ಅಕ್ಕಿಯನ್ನೇ ವಿತರಿಸಲಾಗುತ್ತದೆ ಎಂದು ತಹಸೀಲ್ದಾರ್ ಕುಂಞ ಅಹಮದ್ ತಿಳಿಸಿದರು.
ಮಾಧ್ಯಮ ದೊಂದಿಗೆ ಮಾತನಾಡಿದ ಅವರು, ಸರ್ಕಾರದ ಪತ್ರದಲ್ಲಿ ರಾಜ್ಯದಲ್ಲಿರುವ ಅಂತ್ಯೋದಯ ಅನ್ನ ಯೋಜನೆ ಮತ್ತು ಆದ್ಯತಾ ಪಡಿತರ ಚೀಟಿಗಳ ಪ್ರತಿ ಫಲಾನುಭವಿಗೆ ರಾಷ್ಟ್ರೀಯ ಅಹಾರ ಭದ್ರತಾ ಕಾಯ್ದೆಯನ್ವಯ ವಿತರಿಸಲಾಗುವ 05 ಕೆ.ಜಿ ಆಹಾರ ಧಾನ್ಯದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿಯಾಗಿ 05 ಕೆ.ಜಿ ಅಹಾರ ಧಾನ್ಯದ ಬದಲಾಗಿ ಪ್ರತಿ ಕೆ.ಜಿ.ಗೆ ರೂ.34/-ರಂತೆ ಪಡಿತರ ಚೀಟಿಯಲ್ಲಿನ ಕುಟುಂಬದ ಮುಖ್ಯಸ್ಥರ ಬ್ಯಾಂಕ್ ಖಾತೆಗೆ ಡಿಬಿಟಿ ಮೂಲಕ ರೂ.170/- ರಂತೆ ಹಣವನ್ನು ವರ್ಗಾಯಿಸಲಾಗುತ್ತಿರುತ್ತದೆ.
ಸರ್ಕಾರದ ಆದೇಶದಲ್ಲಿ ಫೆಬ್ರವರಿ 2025ರ ಮಾಹೆಯಿಂದ ಜಾರಿಗೆ ಬರುವಂತೆ ನೇರ ನಗದು ವರ್ಗಾವಣೆ (ಡಿಬಿಟಿ) ಬದಲಾಗಿ ಅನ್ನಭಾಗ್ಯ ಯೋಜನೆಯಡಿ ಸರ್ಕಾರದ ಆದೇಶದ ಮಾರ್ಗಸೂಚಿಯಂತೆ ಏಕ-ಸದಸ್ಯ ದ್ಧಿ-ಸದಸ್ಯ ಮತ್ತು ತ್ರಿ-ಸದಸ್ಯ ಎಎವೈ ಪಡಿತರ ಚೀಟಿಗಳನ್ನು ಹೊರತುಪಡಿಸಿ ನಾಲ್ಕು ಮತ್ತು ನಾಲ್ಕಕ್ಕಿಂತ ಹೆಚ್ಚಿನ ಸದಸ್ಯರುಳ್ಳ ಎಎವೈ ಪಡಿತರ ಚೀಟಿಯ ಪ್ರತಿ ಫಲಾ ನುಭವಿಗೆ ಮತ್ತು ಪಿಎಚ್ಎಚ್ ಪಡಿತರ ಚೀಟಿಯ ಪ್ರತಿ ಫಲಾನುಭವಿಗೆ ಪ್ರತಿ ಮಾಹೆ ಹೆಚ್ಚುವರಿಯಾಗಿ 05 ಕೆಜಿ ಅಕ್ಕಿಯನ್ನು ಹಂಚಿಕೆ ನೀಡಬೇಕಾಗಿರುತ್ತದೆ. ಈಗಾಗಲೇ ಫೆಬ್ರವರಿ 2025ರ ಮಾಹೆಯ ಪಡಿತರ ವಿತರಣೆ ಮುಕ್ತಾಯವಾಗಿರುವುದರಿಂದ ಫೆಬ್ರವರಿ ಮತ್ತು ಮಾರ್ಚ್-2025ರ ಮಾಹೆಗಳ ಡಿಬಿಟಿ ಬದಲಾಗಿ ಹೆಚ್ಚುವರಿ 05 ಕೆಜಿ ಅಕ್ಕಿಯನ್ನು ಮಾರ್ಚ್-2025ರ ಮಾಹೆ ಯಲ್ಲಿ ಹಂಚಿಕೆ ನೀಡಲಾಗಿರುತ್ತದೆ ಎಂದರು.
ಮಾರ್ಚ್ ತಿಂಗಳಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಉಚಿತವಾಗಿ ಫೆಬ್ರವರಿ ತಿಂಗಳ 5 ಕೆ.ಜಿ ಹಾಗೂ ಮಾರ್ಚ್ ತಿಂಗಳ 10 ಕೆ.ಜಿ ಅಕ್ಕಿಯನ್ನು ಕುಟುಂಬದ ಪ್ರತಿ ಸದಸ್ಯರಿಗೆ ಡಲಾಗುವುದು. ಅಂತ್ಯೋದಯ ಪಡಿತರ ಚೀಟಿದಾರರಿಗೆ 3 ಸದಸ್ಯರಿಂದ 35 ಕೆ.ಜಿ, 4 ಸದಸ್ಯರಿದ್ದರೆ 45, 5 ಜನರಿದ್ದರೆ 65, 6 ಸದಸ್ಯರಿದ್ದರೆ 85, 7 ಸದಸ್ಯರಿದ್ದರೆ 106, 8 ಸದಸ್ಯರಿದ್ದರೆ 125, 9 ಸದಸ್ಯರಿದ್ದರೆ 145 ಕೆ.ಜಿ. ಅಕ್ಕಿ ನೀಡಲಾಗುವುದು ಎಂದರು. ಈ ಸಂದರ್ಭದಲ್ಲಿ ಶಿರಸ್ತೇದಾರ್ ಸುನಿಲ್ ಕುಮಾರ್, ಆಹಾರ ನಿರೀಕ್ಷರಾದ ಕೃಷ್ಣೇಗೌಡ, ಹರೀಶ್ ಉಪಸ್ಥಿತರಿದ್ದರು.




