ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದೇ ರೀತಿಯ ಪರಿಷ್ಕರಣೆ ಇಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ, ಹಣ ಸಂದಾಯಕ್ಕೆ ತಾಂತ್ರಿಕ ಸಮಸ್ಯೆ ಯಾವುದೂ ಇಲ್ಲ ಎಂದರು.
ಈಗಾಗಲೇ ಏಪ್ರಿಲ್ ತಿಂಗಳ ಹಣ ಸಂದಾಯವಾಗಿದ್ದು, ಮೇ ತಿಂಗಳ ಹಣ ವರ್ಗಾವಣೆ ಆಗಬೇಕಿದೆ. ನಮಗೆ ಹಣಕಾಸು ಇಲಾಖೆಯಿಂದ ಹಣ ಬಿಡುಗಡೆ ಆಗಬೇಕಿದೆ. ನಮ್ಮ ಇಲಾಖೆಯ ಬದಲಾಗಿ ಈಗ ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿ ಮೂಲಕ ಹಣ ಸಂದಾಯವಾಗುತ್ತಿದೆ ಎಂದು ಹೇಳಿದರು.
ಗೃಹಲಕ್ಷ್ಮಿ ಯೋಜನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಕಾಳಜಿ ಇದೆ. ಯೋಜನೆಗೆ ಯಾವುದೇ ತೊಂದರೆ ಇಲ್ಲ. ಜಿಲ್ಲಾ ಹಾಗೂ ತಾಲೂಕು ಪಂಚಾಯಿತಿಗಳ ಮೂಲಕ ಹಣ ಸಂದಾಯವಾಗಬೇಕು ಎಂದು ಕೇಂದ್ರದ ನಿಯಮ ಇದೆ. ಹೀಗಾಗಿ ಫಲಾನುಭವಿಗಳಿಗೆ ಹಣ ತಲುಪಲು ಕೊಂಚ ವಿಳಂಬವಾಗುತ್ತಿದೆ ಎಂದು ಉತ್ತರಿಸಿದರು.