ಬೆಂಗಳೂರು : ಬೆಂಗಳೂರಿನಂತಹ ನಗರದಲ್ಲಿ ಮೂಕಪ್ರಾಣಿಗಳ ಮೇಲೆ ಅಟ್ಟಹಾಸ ಮೆರೆಯುತ್ತಿರುವ ಪ್ರಕರಣಗಳು ಒಂದೊಂದಾಗೆ ಕೇಳಿ ಬರುತ್ತಿದ್ದು, ಇದೀಗ ರಸ್ತೆಯಲ್ಲಿ ಮಲಗಿದ್ದ ಹಸುಗಳ ಮೇಲೆ ಕೂಡ ವಿಕೃತಿ ಮೆರೆಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ನಗರದ ಚಾಮರಾಜಪೇಟೆಯ ವಿನಾಯಕ ನಗರದಲ್ಲಿ ಬೈಕ್ ನಲ್ಲಿ ಬಂದ ಕಿಡಿಗೇಡಿಗಳು ರಸ್ತೆಯಲ್ಲಿ ಮಲಗಿದ್ದ ಮೂರು ಹಸುಗಳ ಕೆಚ್ಚಲನ್ನು ಕೊಯ್ದು ವಿಕೃತಿ ಮೆರೆದಿರುವ ಘಟನೆ ನಡೆದಿದ್ದು, ರಕ್ತದ ಮಡುವಿನಲ್ಲಿ ಹಸುಗಳ ನರಳಾಟ ನಡೆಸಿವೆ.
ಶನಿವಾರ ತಡರಾತ್ರಿ ಎಂದಿನಂತೆ ರಸ್ತೆಯ ಬಳಿ ಮೂರು ಹಸುಗಳು ಮಲಗಿದ್ದವು, ಈ ವೇಳೆ ಬಂದ ಕಿಡಿಗೇಡಿಗಳು ಚಾಕುವಿನಿಂದ ಹಸುವಿನ ಕೆಚ್ಚಲು ಕೊಯ್ದು ಎಸ್ಕೇಪ್ ಆಗಿದ್ದಾರೆ. ಹಸುವಿನ ನರಳಾಟ ನೋಡಿ ಸ್ಥಳಕ್ಕೆ ಬಂದ ಸ್ಥಳೀಯರು ಪಶು ಆಸ್ಪತ್ರೆಗೆ ಸಾಗಿಸಿ ಹಸುಗಳಿಗೆ ಚಿಕಿತ್ಸೆ ಕೊಡಿಸಿದ್ದಾರೆ.
ಸದ್ಯ ಈ ಘಟನೆಗೆ ಸಂಬಂಧಪಟ್ಟಂತೆ ಕಿಡಿಗೇಡಿಗಳನ್ನು ಬಂಧಿಸಿ ಕ್ರೂರ ಶಿಕ್ಷೆ ನೀಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದು, ಪ್ರಕರಣಕ್ಕೆ ಸಂಬಂಧಪಟ್ಟಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.