ಬೆಂಗಳೂರು: ಜಂಗಲ್ ಅಥವಾ ಬಿ-ಖರಾಬು ಜಮೀನನ್ನು ಯಾರಿಗೂ ಮಂಜೂರು ಮಾಡಲು ಸಾಧ್ಯವಿಲ್ಲ. ಈ ಹಿಂದೆ ಇಂತಹ ಕೆಲವು ಪ್ರಕರಣಗಳು ಕಂಡು ಬಂದಿದ್ದು ಈ ಬಗ್ಗೆ ತನಿಖೆಯನ್ನೂ ನಡೆಸಲಾಗುತ್ತಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಶಾಸಕಿ ಶಾರದಾ ಪೂರ್ಯಾನಾಯ್ಕ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು ” ಜಂಗಲ್ ಅಥವಾ ಬಿ-ಖರಾಬು ಜಮೀನು ಮಂಜೂರಾತಿ ವಿಚಾರದಲ್ಲಿ ಯಾವುದೋ ಕಾಲದಲ್ಲಿ ತಪ್ಪಾಗಿದೆ.
ಆಗಿನ ಸರ್ಕಾರ ಸರಿಯಾದ ಹೆಚ್ಚೆ ಇಟ್ಟಿಲ್ಲ.ಆದರೆ, ಅದನ್ನು ನಾವು ಸರಿ ಮಾಡುವ ಕೆಲಸಕ್ಕೆ ಮುಂದಾಗಿದ್ದೇವೆ. ಈಗಾಗಲೇ ಬೆಂಗಳೂರು ವಿಭಾಗ ಪ್ರದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿ ಇದರ ನೈಜತೆ ಪರಿಶೀಲನೆಯ ಜವಾಬ್ದಾರಿ ಕೊಟ್ಟಿದ್ದೇವೆ. ತನಿಖೆ ಆರಂಭವಾಗಿದೆ. ಆದರೆ, ಪ್ರಗತಿ ಆಗಿಲ್ಲ. ತನಿಖೆಯನ್ನು ಶೀಘ್ರದಲ್ಲಿ ಮುಗಿಸಲು ಸೂಚಿಸಿದ್ದೇನೆ” ಎಂದು ತಿಳಿಸಿದರು.
ಏತನ್ಮಧ್ಯೆ ಇಂತಹ ಜಮೀನುಗಳು ಪೋಡ್ ಆಗುವುದು ಅಥವಾ ಭೂ ವ್ಯವಹಾರ ನಿಲ್ಲಿಸಬೇಕು ಎಂಬ ಕೂಗೂ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಆಯುಕ್ತರು ಲಿಖಿತ ಸೂಚನೆ ನೀಡಿದ್ದಾರೆ.
ಈಗಾಗಲೇ ಮಂಜೂರಿದಾರರಿಗೆ ಆ ಜಮೀನು ಗ್ರ್ಯಾಂಟ್ ಆಗಿರುವುದರಿಂದ ಅವರ ಹಕ್ಕನ್ನು ಸರ್ಕಾರ ಮೊಟಕುಗೊಳಿಸಲು ಸಾಧ್ಯವಿಲ್ಲ ಎಂದು ಕಾನೂನಾತ್ಮಕ ಸೂಚನೆ ನೀಡಿದ್ದಾರೆ. ಅವರ ಪತ್ರ ಕಾನೂನಿಗೆ ಬದ್ದವಾಗಿದೆ.
ಈ ನಡುವೆ ಒಂದೇ ಕುಟುಂಬಕ್ಕೆ 119 ಏಕರೆ ಕೊಟ್ಟಿದ್ದಾರೆ. ಎರಡನೇಯದು ಹೀಗೆ ಮಂಜೂರಾದ ಜಮೀನು ಜಂಗಲ್ ಖರಾಬು. ಈ ಎರಡೂ ಪ್ರಶ್ನೆ ಬಗ್ಗೆಯೂ ವಿಚಾರಣೆ ನಡೆಯುತ್ತಿದೆ. ಶೀಘ್ರ ವಿಚಾರಣೆ ಮುಗಿದರೆ ಇದರ ರದ್ದತಿ ಬಗ್ಗೆ ತೀರ್ಮಾನ ಮಾಡಬಹುದು.
ಹೀಗಾಗಿ ಶೀಘ್ರ ವಿಚಾರಣೆಗೆ ಸೂಚಿಸಲಾಗಿದೆ. ಅಲ್ಲದೆ, ವಿಚಾರಣೆ ಮುಗಿಯುವವರೆಗೆ ಏನು ಮಾಡಬಹುದು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಬಳಿಯೂ ಸಲಹೆ ಕೇಳಲಾಗಿದೆ” ಎಂದು ಮಾಹಿತಿ ನೀಡಿದರು.




