ಮುಂಬೈ: “ದಬ್ಬಾಳಿಕೆಯ ಮನಸ್ಥಿತಿ” ಮತ್ತು “ಅತ್ಯಾಚಾರಿ ಮನಸ್ಥಿತಿ”ಯನ್ನು ಕೊಲ್ಲಲು ಬಯಸುವ ಮಹಿಳೆಯರಿಗೆ “ಒಂದು ಕೊಲೆ”ಯ ವಿರುದ್ಧ ಶಿಕ್ಷೆಯಿಂದ ವಿನಾಯಿತಿ ನೀಡಬೇಕು ಎಂದು ಎನ್‌ಸಿಪಿ (ಎಸ್‌ಪಿ) ಮಹಿಳಾ ವಿಭಾಗದ ಮುಖ್ಯಸ್ಥೆ ರೋಹಿಣಿ ಖಡ್ಸೆ ಒತ್ತಾಯಿಸಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆದಿರುವ ಶರದ್ ಪವಾರ್ ನೇತೃತ್ವದ ಪಕ್ಷದ ಮಹಿಳಾ ವಿಭಾಗದ ಅಧ್ಯಕ್ಷೆ ಖಡ್ಸೆ, “ಮುಂಬೈನಲ್ಲಿ ಇತ್ತೀಚೆಗೆ ನಡೆದ 12 ವರ್ಷದ ಬಾಲಕಿಯ ಮೇಲಿನ ಸಾಮೂಹಿಕ ಅತ್ಯಾಚಾರವನ್ನು ಉಲ್ಲೇಖಿಸುತ್ತಾ, ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಅಪರಾಧಗಳಿಗೆ ಇದುವೇ ನಿದರ್ಶನ. ಇದನ್ನು ಗಮನದಲ್ಲಿಟ್ಟುಕೊಂಡು ನಮ್ಮ ಬೇಡಿಕೆಯ ಬಗ್ಗೆ ಗಮನಹರಿಸಬೇಕು” ಎಂದು ಒತ್ತಿ ಹೇಳಿದ್ದಾರೆ.
“ನಾವು ಎಲ್ಲಾ ಮಹಿಳೆಯರ ಪರವಾಗಿ ಒಂದು ಕೊಲೆ ಮಾಡಲು ಶಿಕ್ಷೆಯಿಂದ ವಿನಾಯಿತಿ ಕೋರುತ್ತಿದ್ದೇವೆ” ಎಂದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಯ ಪರಿಸ್ಥಿತಿಯ ಬಗ್ಗೆ ರಾಜ್ಯ ಸರ್ಕಾರವನ್ನು ಗುರಿಯಾಗಿಸಿಕೊಂಡು ಆಕ್ರೋಶ ಹೊರಹಾಕಿದ್ದಾರೆ.
ಅಪಹರಣ ಮತ್ತು ಕೌಟುಂಬಿಕ ಹಿಂಸೆ ಸೇರಿದಂತೆ ಮಹಿಳೆಯರ ವಿರುದ್ಧ ಅಪರಾಧಗಳು ಹೆಚ್ಚುತ್ತಿರುವುದರಿಂದ ಭಾರತ ಮಹಿಳೆಯರಿಗೆ ಅತ್ಯಂತ ಅಸುರಕ್ಷಿತ ದೇಶ ಎಂದು ಹೇಳುವ ಸಮೀಕ್ಷಾ ವರದಿಯನ್ನೂ ಅವರು ಪತ್ರದಲ್ಲಿ ಸೇರಿಸಿದ್ದಾರೆ.
“ನಾವು ದಬ್ಬಾಳಿಕೆಯ ಮನಸ್ಥಿತಿ, ಅತ್ಯಾಚಾರ ಪ್ರವೃತ್ತಿ, ಕಾನೂನು ಮತ್ತು ಸುವ್ಯವಸ್ಥೆಯ ಅದಕ್ಷತೆಯನ್ನು ಕೊಲ್ಲ ಬಯಸುತ್ತೇವೆ. ಈ ಬಗ್ಗೆ ಗಂಭೀರವಾಗಿ ಯೋಚಿಸಿದ ನಂತರ ನಮ್ಮ ಬೇಡಿಕೆಯನ್ನು ಈಡೇರಿಸಲಾಗುತ್ತದೆ ಎಂದೇ ನಾವು ಭಾವಿಸುತ್ತೇವೆ” ಎಂದು ಖಡ್ಸೆ ತಿಳಿಸಿದ್ದಾರೆ.
ಈ ಪತ್ರಕ್ಕೆ ಪ್ರತಿಕ್ರಿಯಿಸಿದ ಶಿವಸೇನಾ ಸಚಿವ ಗುಲಾಬ್ರಾವ್ ಪಾಟೀಲ್, “ಖಡ್ಸೆ ಅವರು ಯಾರನ್ನು ಕೊಲ್ಲುತ್ತಾರೆಂದು ಹೇಳಬೇಕು” ಎಂದಿದ್ದಾರೆ.
ಖಡ್ಸೆ ಪತ್ರಕ್ಕೆ ಸ್ವಪಕ್ಷದವರೇ ಆದ ಮನೀಷಾ ಕಾಯಂಡೆ ಪ್ರತಿಕ್ರಿಯಿಸಿ, “ಖಡ್ಸೆ ಬಹುಶಃ ಕೆಲವು ಜನರಲ್ಲಿರುವ ಕೆಲವು ಪ್ರವೃತ್ತಿಗಳನ್ನು ಕೊಲ್ಲುವ ಬಗ್ಗೆ ಮಾತನಾಡುತ್ತಿದ್ದಾರೆ. ಇತ್ತೀಚಿನ ಘಟನೆಗಳಿಂದಾಗಿ ಈ ಭಾವನೆ ಹುಟ್ಟಿಕೊಂಡಿರಬೇಕು” ಎಂದು ಹೇಳಿದ್ದಾರೆ.



