ಸೂಪರ್ ಹಿಟ್ ಸಿನಿಮಾಗಳ ಮೂಲಕ ಭಾರತದಾದ್ಯಂತ ಜನಪ್ರಿಯರಾಗಿರುವ ನ್ಯಾಷನಲ್ ಕ್ರಶ್ ಖ್ಯಾತಿಯ ರಶ್ಮಿಕಾ ಮಂದಣ್ಣ ತಮ್ಮ ಜನ್ಮದಿನ ಆಚರಿಸಿಕೊಳ್ಳಲು ಸಜ್ಜಾಗಿದ್ದಾರೆ. ಇದೇ ಏಪ್ರಿಲ್ 5ಕ್ಕೆ ಕಿರಿಕ್ ಪಾರ್ಟಿ ಬೆಡಗಿ 29ನೇ ವಸಂತಕ್ಕೆ ಕಾಲಿಡಲಿದ್ದಾರೆ. ಜನ್ಮದಿನಕ್ಕೂ ಮುನ್ನ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಗಮನ ಸೆಳೆದಿದ್ದಾರೆ ‘ಶ್ರೀವಲ್ಲಿ’.
ರಶ್ಮಿಕಾ ಮಂದಣ್ಣ ಹೇಳಿದ್ದಿಷ್ಟು: ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನ ಸ್ಟೋರಿ ಸೆಕ್ಷನ್ನಲ್ಲಿ ತಮ್ಮ ಕ್ಯಾಶುವಲ್ ಫೋಟೋ ಹಂಚಿಕೊಂಡ ‘ಪುಷ್ಪ’ ನಟಿ, ”ಇದು ನನ್ನ ಬರ್ತ್ಡೇ ಮಂತ್. ನಾನು ತುಂಬಾನೇ ಉತ್ಸುಕಳಾಗಿದ್ದೇನೆ. ನೀವು ದೊಡ್ಡವರಾದಂತೆ ನಿಮ್ಮ ಹುಟ್ಟುಹಬ್ಬವನ್ನು ಆಚರಿಸುವ ಆಸಕ್ತಿಯನ್ನು ಕಳೆದುಕೊಳ್ಳುತ್ತೀರಿ ಎಂಬುದನ್ನು ನಾನು ಯಾವಾಗಲೂ ಕೇಳಿದ್ದೇನೆ. ಆದ್ರೆ ನನ್ನ ವಿಷಯದಲ್ಲಿ ಹಾಗಿಲ್ಲ. ನಾನು ದೊಡ್ಡವಳಾದಂತೆ ನನ್ನ ಜನ್ಮದಿನವನ್ನು ಆಚರಿಸಲು ಹೆಚ್ಚು ಉತ್ಸುಕಳಾಗುತ್ತಿದ್ದೇನೆ. ನಾನು 29 ವರ್ಷಕ್ಕೆ ಕಾಲಿಡುತ್ತಿದ್ದೇನೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ನಾನು ಮತ್ತೊಂದು ವರ್ಷವನ್ನು ಆರೋಗ್ಯಕರ, ಸಂತೋಷದಾಯಕ ಮತ್ತು ಸುರಕ್ಷಿತ ಕಳೆದಿದ್ದೇನೆ. ಈಗ ಅದನ್ನು ಆಚರಿಸುವುದು ಮತ್ತಷ್ಟು ಯೋಗ್ಯ” ಎಂದು ಬರೆದುಕೊಂಡಿದ್ದಾರೆ.