ವಿಶಾಖಪಟ್ಟಣ : ಪ್ರಸ್ತುತ ಏರಿಕೆಯಾಗುತ್ತಿರುವ ಇಂಧನ ಬೆಲೆ, ಮತ್ತೊಂದೆಡೆ ಹೆಚ್ಚುತ್ತಿರುವ ಪರಿಸರ ಮಾಲಿನ್ಯದ ಕುರಿತ ಕಾಳಜಿಯಿಂದಾಗಿ ಎಲೆಕ್ಟ್ರಾನಿಕ್ ವಾಹನಗಳು ಜನರ ಗಮನ ಸೆಳೆಯುತ್ತಿವೆ. ಆದರೆ ಎಲೆಕ್ಟ್ರಾನಿಕ್ ವಾಹನಗಳ ದುಬಾರಿ ಬೆಲೆಯಿಂದಾಗಿ ಸಾಮಾನ್ಯ ವ್ಯಕ್ತಿಯ ಖರೀದಿಸುವ ಕನಸು ನನಸಾಗಿಯೇ ಉಳಿಯುತ್ತದೆ. ಇದಕ್ಕಾಗಿ ಇಲ್ಲೊಂದು ಯುವ ಮಹಿಳಾ ಇಂಜಿನಿಯರ್ಗಳ ತಂಡ ಬಜೆಟ್‌ಸ್ನೇಹಿ ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನ ಅಭಿವೃದ್ಧಿಪಡಿಸಿದ್ದಾರೆ.
ಆಂಧ್ರ ವಿಶ್ವವಿದ್ಯಾಲಯದ ಮಹಿಳಾ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ಬಿ.ಟೆಕ್ ವಿದ್ಯಾರ್ಥಿಗಳು ಪರಿಸರ ಸ್ನೇಹಿ, ಕೈಗೆಟುಕುವ ದರದ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನವನ್ನು ಕಂಡುಹಿಡಿದಿದ್ದಾರೆ.
ವಿದ್ಯಾರ್ಥಿನಿಯರಾದ ಜಿ.ನವ್ಯಾ, ಆರ್.ಯಮುನಾ, ಕೆ.ಸಿರಿಷಾ, ಕೆ.ದಿವ್ಯಾ ತೇಜ, ಜಿ.ಕುಸುಮಾ, ಪಿ.ಜ್ಯೋತಿ ಪ್ರಸನ್ನಾ, ಪಿ.ಹಿಮಜಾ ಮತ್ತು ಎಂ.ವಿ.ಮೇಘನಾ ಸೇರಿ ಈ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನವನ್ನು ಅಭಿವೃದ್ಧಿಪಡಿಸಿದ್ದಾರೆ. ತಮ್ಮ ಶೈಕ್ಷಣಿಕ ಪ್ರಾಜೆಕ್ಟ್ ಭಾಗವಾಗಿ ಈ ದ್ವಿಚಕ್ರ ವಾಹನವನ್ನು ಯುವತಿಯರು ತಯಾರಿಸಿದ್ದಾರೆ.
ಕಡಿಮೆ ಬೆಲೆಯ ವಿದ್ಯುತ್‌ಚಾಲಿತ ದ್ವಿಚಕ್ರ ವಾಹನವನ್ನು ತಯಾರು ಮಾಡಲು ವಿದ್ಯಾರ್ಥಿನಿಯರು ಎರಡು ತಿಂಗಳು ಅವಿರತ ಶ್ರಮಪಟ್ಟಿದ್ದಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಂಪ್ರದಾಯಿಕ ವಿದ್ಯುತ್ ಚಾಲಿತ ವಾಹನಗಳಿಗಿಂತ ತುಂಬಾ ಕಡಿಮೆ, ಅಂದರೆ ಕೇವಲ 30,000 ರೂ. ಬೆಲೆಯಲ್ಲಿ ಈ ವಿದ್ಯುತ್ ಚಾಲಿತ ವಾಹನವನ್ನು ತಯಾರು ಮಾಡಲಾಗಿದೆ.



