ರಾಣೇಬೆನ್ನೂರು: ಹೋಳಿ ಹಬ್ಬದ ಅಂಗವಾಗಿ ನಗರದಲ್ಲಿ ಪ್ರತಿ ವರ್ಷದಂತೆ ಆಯೋಜಿಸಲಾಗಿದ್ದ ‘ಜೀವಂತ ರತಿ-ಮನ್ಮಥರನ್ನು ನಗಿಸುವ ಸ್ಪರ್ಧೆ’ ಈ ಬಾರಿಯೂ ತೀವ್ರ ಕುತೂಹಲ ಕೆರಳಿಸಿತ್ತು.
ಆದರೆ, ರತಿ-ಮನ್ಮಥ ವೇಷಧಾರಿಗಳು ನಗದೆ ತಮ್ಮ 66 ವರ್ಷಗಳ ಸುದೀರ್ಘ ಪರಂಪರೆಯನ್ನು ಯಶಸ್ವಿಯಾಗಿ ಮುಂದುವರಿಸಿದ್ದಾರೆ.
ಇದರಿಂದಾಗಿ ನಗಿಸಿದವರಿಗೆ ನೀಡಲು ಘೋಷಿಸಲಾಗಿದ್ದ ₹13 ಲಕ್ಷ ನಗದು ಬಹುಮಾನ ಸಮಿತಿಯ ಬಳಿಯೇ ಉಳಿದುಕೊಂಡಿದೆ.
ಒಕುಳಿ ಹಬ್ಬದ ಮುನ್ನಾದಿನವಾದ ಮಂಗಳವಾರ ನಗರದ ದೊಡ್ಡಪೇಟೆಯ ರಾಮಲಿಂಗೇಶ್ವರ ದೇಗುಲದ ಬಳಿ ವಿವಿಧ ಸಮಿತಿಗಳಿಂದ ಜೀವಂತ ರತಿ-ಮನ್ಮಥರನ್ನು ಕೂರಿಸಲಾಗಿತ್ತು.
ಸಾರ್ವಜನಿಕರು ಇವರನ್ನು ನಗಿಸಲು ನಾನಾ ತರಹದ ಕಸರತ್ತುಗಳನ್ನು ನಡೆಸಿದರು. ಆದರೆ ವೇಷಧಾರಿಗಳು ಕಿಂಚಿತ್ತೂ ನಗದೆ ಗಂಭೀರವಾಗಿಯೇ ಉಳಿದರು. ಬದಲಿಗೆ ನಗಿಸಲು ಹೋದವರೇ ಹಾಸ್ಯಕ್ಕೀಡಾದ ಪ್ರಸಂಗಗಳು ಕಂಡುಬಂದವು.
ನನ್ನ ಮದುವೆಗೆ ಬಂಗಾರ ಖರೀದಿಸಬೇಕಿದೆ, ನೀವು ನಕ್ಕರೆ ನಮಗೆ ಆರ್ಥಿಕ ಸಹಾಯವಾಗುತ್ತದೆ, ದಯವಿಟ್ಟು ನಕ್ಕುಬಿಡಿ” ಎಂದು ಯುವತಿಯೊಬ್ಬಳು ಪರಿಪರಿಯಾಗಿ ಬೇಡಿಕೊಂಡರೂ ರತಿ-ಮನ್ಮಥರು ಮಾತ್ರ ಮೌನ ಮುರಿಯಲಿಲ್ಲ.ಹೀಗಾಗಿ ಈ ಬಾರಿಯ ‘ಹೋಳಿ ಬಂಪರ್’ ಮೊತ್ತವಾದ ₹13 ಲಕ್ಷ ಯಾರ ಪಾಲೂ ಆಗದೆ ಹಾಗೆಯೇ ಉಳಿದಿದೆ. ರಾಣೇಬೆನ್ನೂರಿನ ಈ ಅಪರೂಪದ ಸಂಪ್ರದಾಯ ನೋಡುಗರ ಗಮನ ಸೆಳೆಯುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದೆ.




