ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರರು ದಾಳಿ ಮಾಡಿದ ವಿಚಾರವಾಗಿ ಬಿಜೆಪಿಯವರು ಜವಾಹರಲಾಲ್ ನೆಹರೂ ಮಾಡಿದ ತಪ್ಪಿನಿಂದಾಗಿ ಇಂದು ದೇಶ ಕಷ್ಟ ಅನುಭವಿಸುತ್ತಿದೆ ಎಂದು ಹೇಳಿದ್ದಾರೆ. ಈ ವಿಚಾರವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಖರ್ಗೆ, ನೆಹರು ಅವರ ಹೆಸರಿನಲ್ಲಿ ಈಗ ಟೀಕೆ ಮಾಡುತ್ತಿರುವವರು ಅಂದು ಹುಟ್ಟಿಯೇ ಇರಲಿಲ್ಲ. ಅಂದು ದೇಶ ಯಾವ ಸ್ಥಿತಿಯಲ್ಲಿತ್ತು ಅಂತ ಅವರಿಗೆ ಗೊತ್ತಿಲ್ಲ. ಆರ್‌ಎಸ್‌ಎಸ್ ಮತ್ತು ಬಿಜೆಪಿ ಮೀಸಲಾತಿಗೆ ವಿರೋಧಿಯಾಗಿತ್ತು ಎಂದು ಹೇಳಿದರು.
ಪಹಲ್ಗಾಮ್ ದಾಳಿ ಕುರಿತಂತೆ ವಿಶೇಷ ಅಧಿವೇಶನಕ್ಕೆ ಒತ್ತಾಯಿಸಿದ್ದೆ. ಕೇಳೋದು ನಮ್ಮ ಧರ್ಮ ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟದ್ದು. ಇನ್ನೆರಡು ದಿನಗಳಲ್ಲಿ ಅಥವಾ ಮುಂದಿನ ಸಂಪುಟ ಸಭೆಯಲ್ಲಾದರೂ ವಿಶೇಷ ಅಧಿವೇಶನ ಕರೆಯುವ ಬಗ್ಗೆ ಕೇಂದ್ರ ಸರ್ಕಾರ ಪ್ರಕಟಿಸಬೇಕು ಎಂದು ಅವರು ಒತ್ತಾಯಿಸಿದರು.
ವಿಶೇಷ ಅಧಿವೇಶನ ಕರೆಯಬೇಕೆಂದು ಎಲ್ಲ ಪಕ್ಷಗಳ ಒತ್ತಾಯವಾಗಿದೆ. ವಿಶೇಷ ಅಧಿವೇಶನ ನಡೆಸಿದರೆ ಸಮಗ್ರವಾಗಿ ಚರ್ಚೆ ಮಾಡಬಹುದು. ಉಗ್ರ ದಾಳಿಯ ಬಗ್ಗೆ ಸಮಗ್ರವಾಗಿ ಚರ್ಚಿಸಬಹುದು ಎಂದು ಎಂದು ಅವರು ತಿಳಿಸಿದರು.