ಬೆಳಗಾವಿ : ನಿನ್ನೆ ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ 6 ವರ್ಷದ ಬಾಲಕಿಯ ಮೇಲೆ ಬಿಹಾರ್ ಮೂಲದ ವ್ಯಕ್ತಿ ಒಬ್ಬ ಅತ್ಯಾಚಾರ ಮಾಡಿದ್ದು ಅಲ್ಲದೆ ಭೀಕರವಾಗಿ ಕೊಲೆ ಮಾಡಿದ್ದ. ಇದೀಗ ಈ ಒಂದು ಘಟನೆ ವಾಸುವ ಮುನ್ನವೇ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಬೆಳಗಾವಿಯಲ್ಲಿ ಇಬ್ಬರು ಬಾಲಕಿಯರ ಮೇಲೆ ಮೂವರು ರಾಕ್ಷಸರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ವರದಿಯಾಗಿದೆ.
ಈ ಒಂದು ಹೀನ ಕೃತ್ಯ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶದಲ್ಲಿ ನಡೆದಿದೆ.ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಚಾಲಕ ಕೌತುಕ್ ಬಡಿಗೇರ ಬಂಧಿತರು. ಆರೋಪಿ ಅಭಿಷೇಕ್ ಇನ್‌ಸ್ಟಾಗ್ರಾಂ ಮೂಲಕ ಓರ್ವ ಬಾಲಕಿಗೆ ಪರಿಚಯವಾಗಿದ್ದ. ಸವದತ್ತಿಗೆ ಹೋಗುತ್ತಿದ್ದೇನೆ ನೀನು ಬಾ ಎಂದು ಬಾಲಕಿಗೆ ಪುಸಲಾಯಿಸಿದ್ದಾನೆ.
ಈತನ ಮಾತು ನಂಬಿ, ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೂಗೇರಿ ಬಸ್ ನಿಲ್ದಾಣದಕ್ಕೆ ಹೋಗಿದ್ದಾರೆ.ಅಲ್ಲಿ ಆರೋಪಿ ಅಭಿಷೇಕ ಬಾಲಕಿಯರನ್ನು ಎರ್ಟಿಗಾ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಎರ್ಟಿಗಾ ಕಾರಿನಲ್ಲಿ ಮೂರೂ ಜನ ಆರೋಪಿಗಳಿದ್ದರು.
ಸಂತ್ರಸ್ತ ಬಾಲಕಿಯರನ್ನು ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿ, ಅಲ್ಲಿ ಬಾಲಕಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಅತ್ಯಾಚಾರ ಎಸಗುವ ವೇಳೆ ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದು, ನಾವು ಗೋವಾಕ್ಕೆ ಕರೆದಾಗ ನೀವು ಬರಬೇಕು ಇಲ್ಲವಾದರೆ ಈ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುತ್ತೇವೆ.
ಅಕಸ್ಮಾತ್ ಪೊಲೀಸರಿಗೆ ಏನಾದರೂ ದೂರು ಕೊಟ್ಟರೆ ಕೊಲೆ ಮಾಡುತ್ತೇವೆ ಎಂದು ಕೂಡ ಆರೋಪಿಗಳು ಬೆದರಿಕೆ ಹಾಕಿದ್ದಾರೆ. ಬಳಿಕ ಸಂತ್ರಸ್ತ ಬಾಲಕಿಯರು ತಮ್ಮ ಮನೆಗೆ ಬಂದು ವಿಷಯ ತಿಳಿಸಿದ್ದಾರೆ.
ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ಬಳಿಕ ಮತ್ತೋರ್ವ ಆರೋಪಿಯನ್ನು ಕೂಡ ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.