ಬೆಳಗಾವಿ : ಈಗ ಹೇಳಿ ಕೇಳಿ ಬೇಸಿಗೆ ರಜೆ. ಮಕ್ಕಳು ಕುಣಿದು ಕುಪ್ಪಳಿಸುವ ಸಮಯ. ಆದ್ರೆ ಪೋಷಕರು ಹೆಚ್ಚು ನಿಗಾ ವಹಿಸಬೇಕು. ಯಾಕಂದ್ರೆ, ಬೆಳಗಾವಿಯಲ್ಲಿ ಘನಘೋರ ದುರಂತವೊಂದು ಸಂಭವಿಸಿದೆ.
ಶಾಲೆಗೆ ರಜೆ ಇದ್ದ ಕಾರಣಕ್ಕೆ ಈಜಲು ಹೋದ ಮೂವರು ಬಾಲಕರು ಕೃಷಿ ಹೊಂಡದಲ್ಲಿ ಮುಳುಗಿ ಮೃತಪಟ್ಟ ಘಟನೆ ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದ ಜಮೀನಿನಲ್ಲಿ ಶುಕ್ರವಾರ ಸಂಜೆ ನಡೆದಿದೆ.
ಇಂಗಳಿ ಗ್ರಾಮದ ಪೃಥ್ವಿರಾಜ್ ಕೆರಬಾ( 13), ಅಥರ್ವ ಸೌಂದಲಗೆ (15), ಸಮರ್ಥ ಗಡಕರಿ (13) ಮೃತ ವಿದ್ಯಾರ್ಥಿಗಳು.
ಮೂವರು ವಿದ್ಯಾರ್ಥಿಗಳಿಗೂ ಈಜು ಬರುತ್ತಿರಲಿಲ್ಲ. ಮೂವರು ಸೇರಿ ಈಜು ಕಲಿಯಲು ಮನೆಯಿಂದ ಸೈಕಲ್ ತೆಗೆದುಕೊಂಡು ಊರ ಹೊರಗಿರುವ ಕೃಷಿ ಹೊಂಡಕ್ಕೆ ಈಜು ಕಲಿಯಲು ಕೃಷಿ ಹೊಂಡಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ.
ಮೂವರು ವಿದ್ಯಾರ್ಥಿಗಳಿಗೆ ಈಜು ಬರದೆ ಇದ್ದ ಕಾರಣಕ್ಕೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೊಲದ ಮಾಲೀಕ ಸುತ್ತಾಡುತ್ತಿದ್ದಾಗ ಹೊಂಡದ ಪಕ್ಕದಲ್ಲಿ ಸೈಕಲ್ ಇದ್ದುದನ್ನು ಕಂಡು ಹೊಂಡ ಇಣುಕಿದಾಗ ಮೂವರು ಬಾಲಕರ ಶವ ಪತ್ತೆಯಾಗಿದೆ.
ಅಂಕಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರ ರೋಧನೆ ಮುಗಿಲುಮುಟ್ಟಿದೆ.




