ಬೆಳಗಾವಿ: ಸರ್ಕಾರಿ ಮಹಿಳಾ ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕ್ಯಾಮರಾ ಅಳವಡಿಸಿ ಖಾಸಗಿ ವಿಡಿಯೋಗಳನ್ನು ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ ಮೇಲ್ (crime) ಮಾಡುತ್ತಿದ್ದ ಮೂವರು ನಕಲಿ ಪತ್ರಕರ್ತರನ್ನು ಬೆಳಗಾವಿಯ ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್ (32), ಅಬ್ದುಲ್ ರಶೀದ್ ಮಕಾನದಾರ (51) ಮತ್ತು ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಇವರು ತಮ್ಮನ್ನು ಪತ್ರಕರ್ತರೆಂದು ಪರಿಚಯಿಸಿಕೊಂಡು ಮಹಿಳಾ ಅಧಿಕಾರಿಯ ಮನೆಗೆ ಪ್ರವೇಶಿಸಿ, ಕೊಠಡಿಯಲ್ಲಿ ರಹಸ್ಯ ಕ್ಯಾಮರಾ ಅಳವಡಿಸಿದ್ದರೆಂದು ತನಿಖೆಯಲ್ಲಿ ತಿಳಿದುಬಂದಿದೆ.
ಆ ಬಳಿಕ ಮಹಿಳಾ ಅಧಿಕಾರಿಯ ಖಾಸಗಿ ವಿಡಿಯೋಗಳನ್ನು ಮುಂದಿಟ್ಟುಕೊಂಡು ಸುಮಾರು ಒಂದು ಕೋಟಿ ರೂಪಾಯಿಗೆ ಬ್ಲ್ಯಾಕ್ ಮೇಲ್ ನಡೆಸಿದ್ದು, ಪ್ರಾರಂಭದಲ್ಲಿ 50 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣ ದಾಖಲಿಸದಂತೆ ಹಲವು ರೀತಿಯ ಒತ್ತಡವೂ ಹಾಕಲಾಗಿತ್ತು ಎನ್ನಲಾಗಿದೆ. ಆದರೂ ಮಹಿಳಾ ಅಧಿಕಾರಿ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ನೀಡಿದ್ದ ದೂರಿನ್ವಯ ಪ್ರಕರಣ ದಾಖಲಿಸಿಕೊಂಡು, ಸಿಪಿಐ ಬಿ.ಆರ್. ಗಡ್ಡೇಕರ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.




