ಕಲಬುರಗಿ : ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕಾರು ಡಿಕ್ಕಿಯಾಗಿ ಕಾರಿನಲ್ಲಿ ನಾಲ್ವರ ಪೈಕಿ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಜಿಲ್ಲೆಯ ಸೇಡಂ ತಾಲೂಕಿನ ಯಲ್ಲಮ್ಮಾ ಗೇಟ್ ಬಳಿ ನಡೆದಿದೆ.
ಮೀನಹಾಬಾಳ ಗ್ರಾಮದ ಯಲ್ಲಪ್ಪ ಹಳಿಮನಿ (45), ತೊಟ್ನಳ್ಳಿಯ ಸದಾಶಿವ (65) ಮತ್ತು ಮೀನಹಾಬಾಳದ ಭೀಮಶಾ (44) ಮೃತ ದುರ್ದೈವಿಗಳು.ಗಾಯಾಳು ಮೌನೇಶ್ ಎಂಬುವವರಿಗೆ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಚಿಂಚೋಳಿ ಮಾರ್ಗದಿಂದ ಸೇಡಂ ಕಡೆಗೆ ತೆರಳುತ್ತಿದ್ದಾಗ, ಅತೀ ವೇಗವಾಗಿ ಕಾರು ಚಲಾಯಿಸಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಎಸ್ಪಿ ಅಡ್ಡೂರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಸೇಡಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.