ಗದಗ: ಬಸ್ ಚಾಲಕರ ಅತಿಯಾದ ವೇಗ, ನಿರ್ಲಕ್ಷ್ಯದಿಂದಾಗಿ ಅಮಾಅಯಕ ಜೀವಗಳು ಬಲಿಯಾಗುತ್ತಿರುವ ಘಟನೆ ರಾಜ್ಯದಲ್ಲಿ ಮುಂದುವರೆದಿದೆ.
ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಮೂವರು ಮಹಿಳೆಯರ ಮೇಲೆ ಕೆ.ಕೆ.ಆರ್.ಟಿ.ಸಿ ಬಸ್ ಹರಿದ ಘಟನೆ ಗದಗದಲ್ಲಿ ನಡೆದಿದೆ.
ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ (KKRTC) ಬಸ್ ಹರಿದು ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.
ರಾಯಚೂರು ವಿಭಾಗದ ಮಾಸ್ಕಿ ಡಿಪೋಗೆ ಸೇರಿದ ಬಸ್ ಚಾಲಕ, ನಿಲ್ದಾಣದ ಒಳಗೆ ಅತಿವೇಗವಾಗಿ ಬಸ್ ಚಾಲನೆ ಮಾಡಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿ ಮಹಿಳೆಯರ ಮೇಲೆ ಬಸ್ ಹರಿದಿದೆ.
ಸುನಗ ಗ್ರಾಮದ ನಿವಾಸಿ ಶಾಂತವ್ವ ಸಿದ್ದಪ್ಪ ಕೊರ್ತಿ ಎಂಬುವವರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸ್ ಚಕ್ರ ಹರಿದ ಪರಿಣಾಮ ಅವರ ಕಾಲು ತುಂಡಾಗಿದ್ದು, ಬೆನ್ನಿನ ಭಾಗಕ್ಕೂ ಗಂಭೀರ ಗಾಯಗಳಾಗಿವೆ.
ಶಾಂತವ್ವ ಅವರ ಸ್ಥಿತಿ ಚಿಂತಾಜನಕವಾಗಿದ್ದರಿಂದ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಇಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿವೆ.
ಘಟನೆಗೆ ಸಂಬಂಧಿಸಿದಂತೆ ಗದಗ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಿರ್ಲಕ್ಷ್ಯದ ಚಾಲನೆ ತೋರಿದ ಬಸ್ ಚಾಲಕನ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.




