ವಿಜಯಪುರ: ಡಾ. ಬಿಆರ್ ಅಂಬೇಡ್ಕರ್ ನಿಗಮದ ವ್ಯಾಪ್ತಿಯಲ್ಲಿ ಬರುವ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಎಸ್ ಟಿ ಸಮುದಾಯದ ಜನರಿಗೆ ಇರುವ ಸರಕಾರದ ಯೋಜನೆಗಳಲ್ಲಿ ಒಂದಾದ ಉದ್ಯಮಶೀಲತ ಅಭಿವೃದ್ಧಿ ಯೋಜನೆಯಲ್ಲಿ ಬಹುಕೋಟಿ ಅಕ್ರಮ ಹಣ ವರ್ಗಾವಣೆಯ ಸಂಬಂಧಿಸಿದಂತೆ ನಿಗಮದ ಅಧಿಕಾರಿಗಳು ಹಾಗೂ ಮಧ್ಯವರ್ತಿಗಳು ಸೇರಿದಂತೆ ಐದು ಜನರ ಮೇಲೆ ನಗರದ ಜಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧ್ಯವರ್ತಿಗಳಾದ ವಿಜಯಪುರ ಜಿಲ್ಲೆಯ ಹಡಗಲಿ ಗ್ರಾಮದ ಶಶಿಕಾಂತ್ ಜಗನ್ನಾಥ್ ಹಜಾರೆ ಮತ್ತು ವಿನೋದ ಜಗನ್ನಾಥ್ ಹಜಾರೆ, ಹಾಗೂ ಜಿಲ್ಲಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕಿ ರೇಣುಕಾ ಸಾತರ್ಲೇ, ಇಂಡಿ ತಾಲೂಕು ಅಧಿಕಾರಿಯಾದ ಸಂಗಮೇಶ ಪೂಜಾರಿ, ನಿಗಮದ ವಿಷಯ ನಿರ್ವಾಹಕರಾದ ಚೇತನ್ ಕೊಳೋರಗಿ ಇವರುಗಳ ವಿರುದ್ಧ ಜಲ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ 1860 (ಕಲಂ 408, 420, ಹಾಗೂ 149 ಕಲಂ) ಅನ್ವಯ ದಲಿತ ಸಮರ ಸೇನೆ ಜಿಲ್ಲಾಧ್ಯಕ್ಷ ಗೌಡಪ್ಪ ಬಡಿಗೇರ ಪ್ರಕರಣ ದಾಖಲಿಸಿದ್ದಾರೆ.
ಈ ಅವ್ಯವಹಾರದ ಕುರಿತು 12.02.2024ರಂದು ಜಾರಿ ನಿರ್ದೇಶನಲಯಕ್ಕೆ ವಿಚಾರಣೆಗೆ ಅರ್ಜಿ ಸಲ್ಲಿಸಿದ್ದು, ಅದರಂತೆ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ವಿಜಯಪುರ ಅವರು ತನಿಖೆ ಮಾಡಲಾಗಿ ಸನ್ 2019-20ರ ಸಾಲಿನಲ್ಲಿ ಅಕ್ರಮ ಹಣ ದುರ್ಬಳಕೆ ಆಗಿರುವುದು ಕಂಡುಬಂದಿರುತ್ತದೆ. ತನಿಖಾ ವರದಿ ಅನ್ವಯ ಪ್ರಕರಣ ದಾಖಲಾಗಿದೆ.
ಸದರಿ ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ದುರ್ಬಳಕೆಯಾದ 4.5 ಲಕ್ಷ ಹಣವನ್ನು ವಾಪಸ್ ಸರ್ಕಾರಕ್ಕೆ ಭರಣ ಮಾಡಿಸಬೇಕೆಂದು ವೈಗೆರೆ ಫಿರ್ಯಾದಿಯಲ್ಲಿ ನಮೂದು ಅದೆ. ಘಟನೆಗೆ ಸಂಬಂಧಿಸಿದಂತೆ ದೂರದಾರ ಡಿಎಸ್ಎಸ್ ಜಿಲ್ಲಾಧ್ಯಕ್ಷ ಗೌಡಪ್ಪ ಬಡಿಗೇರ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆಯಿಂದ ಸದ್ಯಕ್ಕೆ 4.5 ಲಕ್ಷ ಹಣ ದುರ್ಬಳಕೆ ಆಗಿರುವುದು ಕಂಡುಬಂದಿರುತ್ತದೆ. ಆದರೆ, ಪ್ರಕರಣ ಬಗೆದಷ್ಟು ಆಳ ಅಗಲ ಸಾಕಷ್ಟು ಇದೆ. ಅದರಂತೆ ಆರೋಪಿತರಿಗೆ ತಕ್ಕ ಕಾನೂನು ಶಿಕ್ಷೆಯಾಗಿ ಅಧಿಕಾರಿಗಳ ಮನೆ ಮೇಲೆ ಇಡಿ ವಿಚಾರಣೆ ಆಗಬೇಕು. ಅವರ ಐಷಾರಾಮಿ ಜೀವನದ ಸಂಪತ್ತಿನ ತನಿಖೆ ಆಗಬೇಕು ಎಂದರು.
ಈ ಹಗರಣ ಕೇವಲ ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ಅಷ್ಟೇ ಇಲ್ಲ, ಆದಿ ಜಾಂಬವ, ಭೋವಿ ನಿಗಮ, ತಾಂಡಾ ನಿಗಮಗಳಲ್ಲಿವೂ ದುರ್ಬಳಕೆಯಾದ ಹಣದ ಕುರಿತು ಮರಳಿ ಸರ್ಕಾರಕ್ಕೆ ಭರಣ ಮಾಡಿಸಲು ಹೋರಾಟ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಪರಶು ಕರವಿನಾಳ, ದಲಿತ ಮುಖಂಡ ಲೋಹಿತ್ ಕುಮಾರ್, ಹೋರಾಟಗಾರ ಎಂ. ಆರ್. ದೊಡಮನಿ, ಅಕ್ಷಯ್ ಕುಮಾರ್ ಹೆಂಡೆಗಾರ್, ಸಿದ್ದು ಗೊತ್ತ್ಯಾಳಕರ್ ಮತ್ತು ಇತರರು ಉಪಸ್ಥಿತರಿದ್ದರು.
ವರದಿ: ಸಾಯಬಣ್ಣ ಮಾದರ (ಸಲಾದಹಳ್ಳಿ )