ಬೆಂಗಳೂರು: ಭಾರತ – ಪಾಕ್ ನಡುವೆ ಯುದ್ಧ ಸದೃಶ ಸನ್ನಿವೇಶ ಸೃಷ್ಟಿಯಾದ ಬಳಿಕ ತಾತ್ಕಾಲಿಕವಾಗಿ ಮುಂದೂಡಲ್ಪಟ್ಟಿದ್ದ ಐಪಿಎಲ್ ಪಂದ್ಯಾವಳಿಗೆ ಇಂದಿನಿಂದ ಮರು ಚಾಲನೆ ಸಿಗಲಿದೆ.
ಟೂರ್ನಿಯ ಉಳಿದ ಪಂದ್ಯಗಳು ಪರಿಷ್ಕೃತ ವೇಳಾಪಟ್ಟಿಯಂತೆ ಮುಂದುವರೆಯಲಿದ್ದು, ಇಂದು ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸಿರುವ ವಿರಾಟ್ ಕೊಹ್ಲಿಗೆ ವಿಶೇಷ ಟ್ರಿಬ್ಯೂಟ್ ನೀಡಲು ಆರ್‌ಸಿಬಿ ಅಭಿಮಾನಿಗಳು ಸಜ್ಜಾಗಿದ್ದಾರೆ.
ನೆಚ್ಚಿನ ಆಟಗಾರ ಕಿಂಗ್ ಕೊಹ್ಲಿಗೆ ವಿಶೇಷ ಹಾಗೂ ವಿನೂತನ ರೀತಿಯಲ್ಲಿ ಗೌರವ ಸೂಚಿಸಲು ಆರ್‌ಸಿಬಿ ಅಭಿಮಾನಿಗಳು ಕರೆ ನೀಡಿದ್ದಾರೆ. ಇಂದಿನ ಪಂದ್ಯ ವೀಕ್ಷಿಸಲು ಆಗಮಿಸುವ ಅಭಿಮಾನಿಗಳು ವಿರಾಟ್ ಹೆಸರಿನ ಟೆಸ್ಟ್ ಕ್ರಿಕೆಟ್ ಜರ್ಸಿ/ಬಿಳಿ ಬಣ್ಣದ ಶರ್ಟ್ ಧರಿಸುವಂತೆ ಆರ್‌ಸಿಬಿ ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.
ತಮ್ಮ ನೆಚ್ಚಿನ ಫಾರ್ಮ್ಯಾಟ್ ಆಗಿರುವ ಟೆಸ್ಟ್ ಕ್ರಿಕೆಟ್‌ನ ಜನಪ್ರಿಯತೆಯನ್ನ ಮತ್ತಷ್ಟು ಹೆಚ್ಚಿಸಿರುವ ಆಟಗಾರ ವಿರಾಟ್ ಕೊಹ್ಲಿ. ಇಂದಿನ ಪಂದ್ಯದಲ್ಲಿ ವೈಟ್ ಜರ್ಸಿ/ಟೀ ಶರ್ಟ್ ಧರಿಸುವ ಮೂಲಕ ವಿರಾಟ್ ಕೊಹ್ಲಿಯ ವೈಭವೋಪೇತ ವೃತ್ತಿ ಜೀವನಕ್ಕೆ ಟ್ರಿಬ್ಯೂಟ್ ಸಲ್ಲಿಸೋಣ” ಎಂದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದಲ್ಲಿ ಕರೆ ನೀಡಲಾಗುತ್ತಿದೆ.




