ನವದೆಹಲಿ: ಆಕಾಶವನ್ನು ಕಂಡು ಅಚ್ಚರಿ ಪಡುವವರಿಗೆ ಸಿಹಿ ಸುದ್ದಿ ಇದೆ, ಇಂದು ಮತ್ತು ನಾಳೆ ಅಂದರೆ ಮಾರ್ಚ್ 13- 14 ರಂದು ಅಪರೂಪದ ಮತ್ತು ವಿಸ್ಮಯಕಾರಿಯಾದ ಪೂರ್ಣ ಚಂದ್ರಗ್ರಹಣ ಅಥವಾ “ರಕ್ತ ಚಂದ್ರ” ವನ್ನು ಕಣ್ತುಂಬಿಕೊಳ್ಳುವ ಅವಕಾಶ ಲಭ್ಯವಿದೆ.
ಈ ಅದ್ಭುತ ವಿದ್ಯಮಾನವು ಅಮೆರಿಕದ ಎಲ್ಲಾ ರಾಜ್ಯಗಳಿಂದಲೂ ಗೋಚರಿಸಲಿದ್ದು, ಇಡೀ ಪಶ್ಚಿಮ ಗೋಳಾರ್ಧವೇ ಈ ದೃಶ್ಯ ವೈಭವಕ್ಕೆ ಸಾಕ್ಷಿಯಾಗಲಿದೆ.
ಹಲವು ವರ್ಷಗಳ ನಂತರ ಅಮೆರಿಕದ ಎಲ್ಲಾ ರಾಜ್ಯಗಳ ಜನರು ಈ ಅಪರೂಪದ ಖಗೋಳ ಘಟನೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ದೊರೆತಿರುವುದು ವಿಶೇಷ. ಆದರೆ, ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲ.
ಮಾರ್ಚ್ 13 ಮತ್ತು 14ರ ಮುಂಜಾನೆ ವೇಳೆ ಸೂರ್ಯ ಮತ್ತು ಚಂದ್ರನ ನಡುವೆ ಭೂಮಿಯು ಸರಳ ರೇಖೆಯಲ್ಲಿ ಬರುವುದರಿಂದ ಈ ಗ್ರಹಣ ಸಂಭವಿಸುತ್ತದೆ. ಈ ಸಂದರ್ಭದಲ್ಲಿ ಭೂಮಿಯ ನೆರಳು ಚಂದ್ರನ ಮೇಲೆ ಬೀಳುವುದರಿಂದ ಚಂದ್ರ ಕೆಂಪು ಬಣ್ಣಕ್ಕೆ ತಿರುಗುತ್ತದೆ.
ಗ್ರಹಣವು ಮಾರ್ಚ್ 13ರ ರಾತ್ರಿ ಸುಮಾರು 11:57 ಆರಂಭವಾಗಲಿದ್ದು, ಈ ವೇಳೆ ಚಂದ್ರನ ಮೇಲೆ ಭೂಮಿಯ ನೆರಳಿನ ಅಂಚು ಪ್ರವೇಶಿಸುವುದನ್ನು ಗಮನಿಸಬಹುದು. ಒಟ್ಟಾರೆಯಾಗಿ ಈ ಚಂದ್ರಗ್ರಹಣವು ಆರು ಗಂಟೆ ಮೂರು ನಿಮಿಷಗಳ ಕಾಲ ನಡೆಯಲಿದ್ದು ಮಾರ್ಚ್ 14ರ ಬೆಳಗ್ಗೆ 6 ಗಂಟೆಗೆ ಮುಕ್ತಾಯವಾಗಲಿದೆ. ಮಾರ್ಚ್ 14ರ ಬೆಳಗ್ಗೆ 2:26ರ ವೇಳೆಗೆ ಚಂದ್ರಗ್ರಹಣವು ಪೂರ್ಣ ಪ್ರಮಾಣದಲ್ಲಿ ಗೋಚರಿಸಲಿದೆ.