ನವದೆಹಲಿ: ಸ್ವಾತಂತ್ರ ಹೋರಾಟಗಾರ ಭಗತ್ ಸಿಂಗ್ ಮತ್ತು ಸಮಾಜ ಸುಧಾರಕ ಭೀಮರಾವ್ ಅಂಬೇಡ್ಕರ್ ಅವರ ಪರಂಪರೆಯನ್ನು ಬಿಜೆಪಿ ಕಡೆಗಣಿಸಿದೆ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜಿವಾಲ್ ಆರೋಪಿಸಿದ್ದಾರೆ.
ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರು ಎಂದು ಆಡಳಿತಾರೂಢ ಬಿಜೆಪಿ ವಿರುದ್ಧ ಕೇಜಿವಾಲ್ ವಾಗ್ದಾಳಿ ನಡೆಸಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ನಡೆದ ‘ಏಕ್ ಶಾಮ್ ಶಹೀದೋಂ ಕೆ ನಾಮ್’ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಜಿವಾಲ್, ‘ಭಗತ್ ಸಿಂಗ್ ಮತ್ತು ಅಂಬೇಡ್ಕರ್ ಅವರ ಕನಸುಗಳನ್ನು ನನಸಾಗಿಸಲು ತಮ್ಮ ಪಕ್ಷ ರಾಜಕೀಯ ಪ್ರವೇಶಿಸಿದೆಯೇ ಹೊರತು ಅಧಿಕಾರಕ್ಕಾಗಿ ಅಲ್ಲ’ ಎಂದು ಹೇಳಿದ್ದಾರೆ.
‘ಬಾಬಾ ಸಾಹೇಬ್ ಅಂಬೇಡ್ಕರ್ ಮತ್ತು ಭಗತ್ ಸಿಂಗ್ ನಮ್ಮ ಆದರ್ಶ ವ್ಯಕ್ತಿಗಳಾಗಿದ್ದಾರೆ. ಬ್ರಿಟಿಷರನ್ನು ದೇಶದಿಂದ ತೊಲಗಿಸಿದರೆ ಸಾಲದು, ಸಮಾಜದ ರಚನೆಯೇ ಬದಲಾಗಬೇಕು. ಇಲ್ಲದಿದ್ದರೆ, ಬ್ರೌನ್ ರೂಲರ್ಸ್ ಬ್ರಿಟಿಷರ ಸ್ಥಾನದಲ್ಲಿ ಇರುತ್ತಾರೆ ಎಂದು ಭಗತ್ ಸಿಂಗ್ ಹೇಳಿದ್ದರು. ಇಂದು ಅದು ನಿಜವಾಗಿದೆ. ಇಂದಿನ ಆಡಳಿತಗಾರರು ಬ್ರಿಟಿಷರಿಗಿಂತ ಕೆಟ್ಟವರಾಗಿದ್ದಾರೆ’ ಎಂದು ಕೇಜಿವಾಲ್ ತಿಳಿಸಿದ್ದಾರೆ.