ಕೊಪ್ಪಳ: ತಾಲೂಕಿನ ಹಲವೆಡೆ ಗುರುವಾರ ಸಂಜೆ ಧಾರಾಕಾರ ಮಳೆಯಾಗಿದ್ದು, ಸಿಡಿಲು ಬಡಿದು ಇಬ್ಬರು ಸಾವನ್ನಪ್ಪಿರುವ ಘಟನೆ ಚುಕ್ಕನಕಲ್ ಬಳಿ ತೋಟದ ಮನೆಯಲ್ಲಿ ಜರುಗಿದೆ.
ಕೊಪ್ಪಳದ ಗೌರಿ ಅಂಗಳದ ನಿವಾಸಿಗಳಾದ ಮಂಜುನಾಥ ಗಾಳಿ (48) ಹಾಗೂ ಗೋವಿಂದಪ್ಪ ಮ್ಯಾಗಲಮನಿ (62) ಸಾವನ್ನಪ್ಪಿದ ದುರ್ದೈವಿಗಳು. ಮಳೆ ಬರುವ ಸಂದರ್ಭದಲ್ಲಿ ತೋಟದ ಮನೆಯ ಕಿಟಕಿ ಬಾಗಿಲು ಹಾಕಲು ಹೋದಾಗ ಸಿಡಿಲು ಬಡಿದು ಇಬ್ಬರೂ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮುದ್ದಾಬಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಗುರುವಾರ ಸಂಜೆ ಸುರಿದ ಮಳೆ ಹಾಗೂ ಸಿಡಿಲಿನ ಆರ್ಭಟಕ್ಕೆ ರೈತನ ಒಂದು ಎತ್ತು ಹಾಗೂ ಒಂದು ಹಸು ಬಲಿಯಾಗಿದೆ. ರೈತ ಕಣ್ಣೀರಿಡುವಂತಾಗಿದೆ.
ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಹನುಮಪ್ಪ ಹಳೆಮನಿ ಎಂಬ ರೈತನಿಗೆ ಸೇರಿದ ಜಾನುವಾರುಗಳು ಇವಾಗಿವೆ. ಎಂದಿನಂತೆ ಕೃಷಿ ಚಟುವಟಿಕೆಯಲ್ಲಿ ತೊಡಗಿ ಮಧ್ಯಾಹ್ನ ತಮ್ಮ ಜಮೀನಿನ ಮನೆಯ ಮುಂದಿನ ಗಿಡದ ಕೆಳಗೆ ಎತ್ತು ಹಾಗೂ ಹಸುವನ್ನು ಕಟ್ಟಿ ಹಾಕಿದ್ದರು. ಎತ್ತುಗಳನ್ನೇ ನಂಬಿ ಕೃಷಿ ಜೀವನ ನಡೆಸುತ್ತಿದ್ದ ಹನುಮಪ್ಪ ಹಳೆಮನಿ ಅವರು ಜಾನುವಾರುಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.
ಇಂದಿನ ದಿನಮಾನದಲ್ಲಿ ಎತ್ತು ಹಾಗೂ ಹಸು ದುಬಾರಿ ಬೆಲೆಯ ಜಾನುವಾರುಗಳಾಗಿದ್ದು, ಸರ್ಕಾರ ಸಿಡಿಲಿಗೆ ಬಲಿಯಾದ ಎತ್ತು ಹಾಗೂ ಹಸುವಿಗೆ ಪರಿಹಾರ ಕೊಡುವಂತೆ ರೈತರು ಒತ್ತಾಯಿಸಿದ್ದಾರೆ. ಇದಕ್ಕೆ ಕೊಪ್ಪಳ ತಹಶೀಲ್ದಾರ್ ವಿಠ್ಠಲ ಚೌಗಲಾ ಸ್ಪಂದಿಸಿದ್ದು, ಪಂಚನಾಮೆ ವರದಿ ಪಡೆಯುವುದಾಗಿ ತಿಳಿಸಿದ್ದಾರೆ.
ತಾಲೂಕಿನ ಮೆಳ್ಳಿಕೇರಿಯಲ್ಲಿ ಬಿರುಗಾಳಿ ಸಹಿತ ಮಳೆ ಸುರಿದ ಪರಿಣಾಮ ಗಂಗಮ್ಮ ಎಂಬ ರೈತ ಮಹಿಳೆ ಬೆಳೆದಿದ್ದ ಎರಡು ಏಕರೆ ಬಾಳೆ ಗಿಡಗಳು ನೆಲಕಚ್ಚಿವೆ. ಸಾಲ ಮಾಡಿ ಬಾಳೆ ಬೆಳೆದಿದ್ದ ಗಂಗಮ್ಮನಿಗೆ ಅಕಾಲಿಕ ಮಳೆಯಿಂದ ಬರಸಿಡಿಲು ಬಡಿದಂತಾಗಿದೆ.
ಗಂಗಾವತಿ ತಾಲೂಕಿನ ಶ್ರೀರಾಮನಗರದಲ್ಲಿ ಮನೆಯ ಮುಂದಿನ ತೆಂಗಿನ ಮರಕ್ಕೆ ಸಿಡಿಲು ಬಡಿದು, ಬೆಂಕಿ ಹೊತ್ತಿಕೊಂಡು ಉರಿಯಿತು.