ತುರುವೇಕೆರೆ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬೀದಿಬದಿಯಲ್ಲಿದ್ದ ವ್ಯಾಪಾರ ಮಾಡದೆ ಹಾಗೇ ಬಿಟ್ಟಿದ್ದ ಅಂಗಡಿಗಳನ್ನು ಪಟ್ಟಣ ಪಂಚಾಯ್ತಿ ತೆರವುಗೊಳಿಸಿತು. ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಆರೋಗ್ಯ ನಿರೀಕ್ಷಕ ನರಸಿಂಹಮೂರ್ತಿ ನೇತೃತ್ವದಲ್ಲಿ ಪೌರಕಾರ್ಮಿಕರು ಪಟ್ಟಣದ ದಬ್ಭೇಘಟ್ಟ ರಸ್ತೆ, ಬಾಣಸಂದ್ರ ರಸ್ತೆ, ಮಾಯಸಂದ್ರ ರಸ್ತೆ, ತಿಪಟೂರು ರಸ್ತೆಗಳ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡದೆ ಬಹಳ ವರ್ಷಗಳಿಂದ ಮುಚ್ಚಿದ ಸ್ಥಿತಿಯಲ್ಲಿದ್ದು ನಾಗರೀಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ತಳ್ಳುವ ಗಾಡಿಗಳು, ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿದರು.
ಈ ಬಗ್ಗೆ ಮಾತನಾಡಿದ ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಪಟ್ಟಣದಲ್ಲಿ ದಿನೇದಿನೇ ಜನ ಸಂದಣಿ ಹಾಗೂ ವಾಹನಗಳು ಹೆಚ್ಚುತ್ತಿವೆ, ಪ್ರಮುಖ ರಸ್ತೆಗಳ ಇಕ್ಕೆಲಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಅಂಗಡಿಯನ್ನಿಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ರಸ್ತೆಯಿಂದ ಸ್ವಲ್ಪ ದೂರ ಅಂಗಡಿ ಇಟ್ಟುಕೊಂಡು ವ್ಯಾಪಾರ ನಡೆಸಿದರೆ ಪಾದಚಾರಿಗಳಿಗೆ, ವಾಹನ ಸವಾರರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಆದರೆ ಪ್ರತಿಯೊಬ್ಬರೂ ರಸ್ತೆಯ ಹತ್ತಿರವೇ ಅಂಗಡಿ ಇಟ್ಟುಕೊಳ್ಳುತ್ತಿರುವುದು ಸಂಚಾರಿ ವ್ಯವಸ್ಥೆಗೆ ಸಮಸ್ಯೆಯಾಗಿದೆ. ಇದಲ್ಲದೆ ಬಹಳ ವರ್ಷಗಳಿಂದ ಪೆಟ್ಟಿಗೆ ಅಂಗಡಿ ಇಟ್ಟು ಅಂಗಡಿ ತೆರೆಯದೆ, ವ್ಯಾಪಾರ ನಡೆಸದೆ ಇರುವ ಹಲವು ಅಂಗಡಿಗಳು ಪ್ರಮುಖ ರಸ್ತೆಗಳಲ್ಲಿದ್ದುದು ಗಮನಕ್ಕೆ ಬಂದಿತ್ತು. ಅವುಗಳನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸಲಾಗಿದೆ ಎಂದರು.
ಪಟ್ಟಣ ಪಂಚಾಯ್ತಿ ಆರೋಗ್ಯ ನಿರೀಕ್ಷಕ ನರಸಿಂಹಮೂರ್ತಿ ಮಾತನಾಡಿ, ಪಟ್ಟಣದ ನಾಗರೀಕರ ಅನುಕೂಲಕ್ಕಾಗಿ ಪಟ್ಟಣ ಪಂಚಾಯ್ತಿ ಹಲವು ಕ್ರಮಗಳನ್ನು ಕೈಗೊಂಡಿದೆ. ಈ ಪೈಕಿ ವ್ಯಾಪಾರ ನಡೆಸದೆ ಹಲವು ಮಂದಿ ರಸ್ತೆ ಬದಿ ಅಂಗಡಿ ಬಿಟ್ಟುಹೋಗಿದ್ದಾರೆ. ಇವುಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ವ್ಯಾಪಾರ ಮಾಡುವಂತವರು ಅಂಗಡಿ ತೆರೆಯಲಿ, ಅದನ್ನು ಬಿಟ್ಟು ಅಂಗಡಿ ಖಾಲಿ ಮಾಡಿ ಪೆಟ್ಟಿಗೆಯನ್ನು ಇಲ್ಲೇ ಬಿಟ್ಟು ಹೋಗುವುದರಿಂದ ಪಟ್ಟಣದ ಅಂದವೂ ಹಾಳಾಗುತ್ತದೆ. ಆ ಸ್ಥಳಗಳಲ್ಲಿ ಗಲೀಜು ಹೆಚ್ಚಾಗಿ ಅನೈರ್ಮಲ್ಯಕ್ಕೆ ಕಾರಣವಾಗುತ್ತದೆ ಎಂದರು.
ಪಟ್ಟಣದ ದಬ್ಭೇಘಟ್ಟ ರಸ್ತೆ, ಬಾಣಸಂದ್ರ ರಸ್ತೆ, ಮಾಯಸಂದ್ರ ರಸ್ತೆ, ತಿಪಟೂರು ರಸ್ತೆಗಳ ರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ಮಾಡದೆ ಬಹಳ ವರ್ಷಗಳಿಂದ ಮುಚ್ಚಿದ ಸ್ಥಿತಿಯಲ್ಲಿದ್ದು ನಾಗರೀಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದ ತಳ್ಳುವ ಗಾಡಿಗಳು, ಪೆಟ್ಟಿಗೆ ಅಂಗಡಿಗಳ ಬಗ್ಗೆ ಹರಾಜುದಾರರಿಂದ ಮಾಹಿತಿ ಪಡೆದಿದ್ದ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಮುಂದಾದರು. ತೆರವು ಕಾರ್ಯಾಚರಣೆಯಲ್ಲಿ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, ಪೌರಕಾರ್ಮಿಕರು ಪಾಲ್ಗೊಂಡಿದ್ದರು.
ವರದಿ: ಗಿರೀಶ್ ಕೆ ಭಟ್




