Ad imageAd image

ರೋಟರಿಯಿಂದ ಚಿದಂಬರೇಶ್ವರ ಗ್ರಂಥಾಲಯಕ್ಕೆ ಟಾಯ್ಸ್ ಲೈಬ್ರರಿ ಕೊಡುಗೆ

Bharath Vaibhav
ರೋಟರಿಯಿಂದ ಚಿದಂಬರೇಶ್ವರ ಗ್ರಂಥಾಲಯಕ್ಕೆ ಟಾಯ್ಸ್ ಲೈಬ್ರರಿ ಕೊಡುಗೆ
WhatsApp Group Join Now
Telegram Group Join Now

ತುರುವೇಕೆರೆ : ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಗಾದೆಯಂತೆ ಮಕ್ಕಳಿಗೆ ಬಾಲ್ಯದಲ್ಲಿ ನೀಡುವ ಶಿಕ್ಷಣ ಅವರ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ರೋಟರಿ ಇ ಕ್ಲಬ್ ಆಫ್ ಬೆಂಗಳೂರು, ಸಖಿ ಅಧ್ಯಕ್ಷೆ ಪ್ರತಿಮಾರಾವ್ ತಿಳಿಸಿದರು.

ತುರುವೇಕೆರೆ ರೋಟರಿ ಕ್ಲಬ್, ರೋಟರಿ ಇ ಕ್ಲಬ್ ಆಫ್ ಬೆಂಗಳೂರು, ಸಖಿ ಪ್ರಾಯೋಜಕತ್ವದಲ್ಲಿ ಪಟ್ಟಣದ ಚಿದಂಬರೇಶ್ವರ ಗ್ರಂಥಾಲಯದಲ್ಲಿ ಟಾಯ್ಸ್ ಲೈಬ್ರರಿ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳ ಬಾಲ್ಯದಲ್ಲಿ ಕಲಿಯುವ ವಿದ್ಯೆ ಅವರ ಜೀವನದುದ್ದಕ್ಕೂ ನೆನಪಿರುತ್ತದೆ. ಪ್ರಸ್ತುತ ಸ್ಪರ್ಧಾತ್ಮಕ ಪ್ರಪಂಚಕ್ಕೆ ಮಕ್ಕಳನ್ನು ಸಿದ್ದಪಡಿಸಬೇಕಿರುವುದರಿಂದ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಿಕ್ಷಣದಲ್ಲಿ ತಂತ್ರಜ್ಞಾನಾಧಾರಿತ, ಮೌಲ್ಯ, ಸಂಸ್ಕಾರಯುತ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ಸಖಿ ಸಂಸ್ಥೆಯು ಸಾಮಾಜಿಕ, ಪರಿಸರ, ಸಂಸ್ಕೃತಿ, ವಿಜ್ಞಾನ, ಗಣಿತ ಇನ್ನಿತರ ಹತ್ತು ಹಲವು ವಿಷಯಗಳನ್ನು ಮಕ್ಕಳಿಗೆ ಕಲಿಸಲು ಸುಲಭವಾಗುವ ಟಾಯ್ಸ್ ಸಾಧನಗಳನ್ನು ಪರಿಚಯಿಸಿ ಭವಿಷ್ಯದ ಪ್ರಜೆಗಳನ್ನು ರೂಪಿಸಲು ನೆರವಾಗುತ್ತಿದೆ ಎಂದರು.

ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಎನ್.ಆರ್.ಜಯರಾಮ್ ಮಾತನಾಡಿ, ಪ್ರಸ್ತುತ ಯುವ ಪೀಳಿಗೆ ಮೊಬೈಲ್, ಟಿವಿ ದೃಶ್ಯಮಾಧ್ಯಮ, ಸಾಮಾಜಿಕ ಜಾಲತಾಣಗಳಿಗೆ ತಮ್ಮನ್ನು ಸಮರ್ಪಿಸಿಕೊಂಡು ಕೆಲವರು ಅಡ್ಡದಾರಿ ಹಿಡಿದರೆ, ಮತ್ತಷ್ಟು ಮಂದಿ ಅನಾರೋಗ್ಯಕ್ಕೆ ಒಳಗಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸಂಸ್ಕೃತಿ, ಇತಿಹಾಸ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಓದುವ ಹವ್ಯಾಸ ಬೆಳೆಸುತ್ತಿರುವ ಗ್ರಂಥಾಲಯ ಹಾಗೂ ಮಕ್ಕಳಿಗೆ ಬಾಲ್ಯದಲ್ಲಿಯೇ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಕೃಷ್ಣಾಸ್ ಪ್ರಿಸ್ಕೂಲ್ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಹೊಸ ತಂತ್ರಜ್ಞಾನದ ಮೂಲಕ ಪುಟಾಣಿ ಮಕ್ಕಳನ್ನು ಜ್ಞಾನದ ಕಡೆಗೆ ಆಕರ್ಷಿತರಾಗುವಂತೆ ಮಾಡುವ ನಿಟ್ಟಿನಲ್ಲಿ ಮಕ್ಕಳ ಆಸಕ್ತಿಯುವ ವರ್ಣರಂಜಿತ ಟಾಯ್ಸ್ ಮೂಲಕ ಹತ್ತಾರು ವಿಷಯಗಳನ್ನು ಕಲಿಸುವ ಸಾಧನಗಳನ್ನು ಸಿದ್ದಪಡಿಸಿ ಎಲ್ಲೆಡೆ ಉಚಿತವಾಗಿ ವಿತರಿಸಿ ಜ್ಞಾನದೀವಿಗೆಯ ಪಸರಿಸುತ್ತಿರುವ ಮಹಿಳಾಮಣಿಗಳ ರೋಟರಿ ಸಖಿ ಸಂಸ್ಥೆಯ ಕಾರ್ಯ ಮೆಚ್ಚುವಂಹುದಾಗಿದೆ. ತುರುವೇಕೆರೆ ರೋಟರಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಸಮಾಜದ ವಿವಿಧ ಸ್ತರಗಳ ಜನರಿಗೆ ಹತ್ತಾರು ರೀತಿಯ ಸೇವೆಯನ್ನು ಒದಗಿಸುವ ಮೂಲಕ ತಾಲೂಕಿನಲ್ಲಿ ಹಾಗೂ ಜಿಲ್ಲೆಯಲ್ಲಿ ಮಾದರಿ ಸೇವಾ ಸಂಸ್ಥೆಯಾಗಿ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ಸೃಜನಾತ್ಮಕ ಕ್ರೀಯಾಶೀಲ ಕಾರ್ಯಗಳಲ್ಲಿ ರೋಟರಿ ಸಂಸ್ಥೆಯ ಸಹಕಾರ ನಿರಂತರವಾಗಿರಲಿದೆ ಎಂದರು.

ರೋಟರಿ ಕ್ಲಬ್ ಅಧ್ಯಕ್ಷ ವಿ.ಆರ್.ಉಮೇಶ್ ಅಧ್ಯಕ್ಷತೆ ವಹಿಸಿದ್ದರು. ಕೃಷ್ಣಾಸ್ ಪ್ರೀಸ್ಕೂಲ್ ನ ಪುಟಾಣಿ ಮಕ್ಕಳು ಪ್ರಾರ್ಥನೆ, ವಚನಗಾಯನ, ಭಗವದ್ಗೀತೆ ಪಠಣ ಮಾಡಿ ನೆರೆದಿದ್ದವರನ್ನು ಆಶ್ಚರ್ಯಗೊಳಿಸಿದರು. ರೋಟರಿ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಗುಪ್ತ, ಗಣಿತ ಸಂವಹನಕಾರ ಕೃಷ್ಣ ಚೈತನ್ಯ, ರೋಟರಿ ಇ ಕ್ಲಬ್ ನ ಕಾರ್ಯದರ್ಶಿ ರಶ್ಮಿ, ಭಾರತೀಯ ಪರಂಪರೆ ಟಾಯ್ಸ್ ನ ತನುಶ್ರೀತೀರ್ಥ, ಟಾಯ್ಸ್ ಪ್ರಾಯೋಜಕರಾದ ವಾಣಿ, ಸರ್ವಮಂಗಳ, ರೋಟರಿ ಕಾರ್ಯದರ್ಶಿ ಸುನಿಲ್, ಖಜಾಂಚಿ ಪ್ರಸನ್ನಕುಮಾರ್, ಗ್ರಂಥಾಲಯದ ರಾಮಚಂದ್ರು, ರೋಟರಿ ನಿರ್ದೇಶಕರಾದ ಅಭಿನೇತ್ರಿ ನರಸಿಂಹಮೂರ್ತಿ, ಅರಳೀಕೆರೆ ಲೋಕೇಶ್, ಸಂತೋಷ್ ಮುಂತಾದವರಿದ್ದರು.

ವರದಿ: ಗಿರೀಶ್ ಕೆ ಭಟ್, ತುರುವೇಕೆರೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!