ಗೋಕಾಕ: ತಮ್ಮನ ಸಾವಿನ ಸುದ್ದಿ ಕೇಳಿ ಅಣ್ಣನು ಸಹಿತ ಹೃದಯಾಘಾತದಿಂದ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಗೋಕಾಕ ತಾಲೂಕಿನ ಕಪರಟ್ಟಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಬೆಳಿಗ್ಗೆ ನಸುಕಿನ ಜಾವ ಸುಮಾರು 4 ಘಂಟೆಗೆ ಅನಾರೋಗ್ಯದಿಂದ 10 ನೇ ತರಗತಿಯಲ್ಲಿ ಓದುತ್ತಿದ್ದ ಸತೀಶ್ ಬಾಗನ್ನವರ (16) ಮೃತಪಟ್ಟಿದ್ದರು. ಈತನ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಬದುಕುಳಿಯುವುದಿಲ್ಲ ಎಂದು ಇವನ ಅಣ್ಣ ಬಸವರಾಜ ಬಾಗನ್ನವರ (24) ಗೆ ತಿಳಿದಾಗ, ಇತನು ಸಹಿತ ಕುಸಿದು ಬಿದ್ದನು. ತಕ್ಷಣವೇ ಇವನನ್ನು ಆಸ್ಪತ್ರೆಗೆ ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮ ಸತೀಶ್ ಬಾಗನ್ನವರ ಸಾವಿನ ಸುದ್ದಿ ಬಂದಿತು. ಸುದ್ದಿ ಕೇಳಿದ ತಕ್ಷಣವೇ ಬಸವರಾಜನು ಸಹಿತ ಹೃದಯಾಘಾತದಿಂದ ಮೃತಪಟ್ಟಿದ್ದಾನೆ.

ಮೈದುನ ಮತ್ತು ಗಂಡನ ಸಾವಿನ ಸುದ್ದಿ ಕೇಳಿ ಬಸವರಾಜ ಬಾಗನ್ನವರ ಇತನ ಪತ್ನಿ ತುಂಬು ಗರ್ಭಿಣಿಯಾಗಿದ್ದ ಪವಿತ್ರಾ ಬಸವರಾಜ ಬಾಗನ್ನವರ (20) ಇವಳು ಸಹಿತ ಕುಸಿದು ಬಿದ್ದಳು. ತಕ್ಷಣವೇ ಇವಳನ್ನು ಗೋಕಾಕ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಯಿತು. ಅದೃಷ್ಟವಶಾತ್ ಪವಿತ್ರಾಳು ಆರೋಗ್ಯದಲ್ಲಿ ಚೇತರಿಕೆ ಕಂಡು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ತನ್ನಿಬ್ಬರು ಗಂಡು ಮಕ್ಕಳು ತಮ್ಮ ಕಣ್ಮುಂದೆಯೇ ಜೀವ ಕಳೆದುಕೊಂಡಿದ್ದು ಇವರ ತಂದೆ-ತಾಯಿಗೆ ಆಘಾತವಾಗಿದೆ. ಸತೀಶ್ ನು 10 ನೇ ತರಗತಿಯಲ್ಲಿ ಓದುತ್ತಿದ್ದನು. ಹಾಗೂ ಬಸವರಾಜ ಬಾಗನ್ನವರ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದನು. ಮನೆಗೆ ಆಧಾರವಾಗಿದ್ದ ಮಕ್ಕಳನ್ನು ಕಳೆದುಕೊಂಡ ಹಿರಿಯ ಜೀವಿಗಳಿಗೆ ಬರ ಸಿಡಿಲು ಬಡೆದಂತಾಗಿದೆ.




