ಬಿಕ್ಕಳಿಕೆ ಹೇಳಿ, ಕೇಳಿ ಬರುವಂತದ್ದಲ್ಲ. ಎಲ್ಲೆಂದರಲ್ಲಿ ಬರುವ ಇದು ಸುತ್ತಮುತ್ತಲಿರುವವರ ಮುಂದೆ ಮುಜುಗರ ಉಂಟು ಮಾಡುತ್ತದೆ. ಈ ಸಮಯದಲ್ಲಿ ಏನು ಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಇದು ನಿಲ್ಲದಿದ್ದರೆ, ಎಂಬ ಭಯವೂ ಆರಂಭವಾಗುತ್ತದೆ. ಆದರೆ ಭಯ ಬಿಡಿ. ಇಲ್ಲಿ ನಾವು ಹೇಳಿರುವ ಸರಳ ಸಲಹೆಗಳನ್ನು ಅನುಸರಿಸುವುದರಿಂದ ತಕ್ಷಣ ಬಿಕ್ಕಳಿಕೆ ಬರುವುದನ್ನು ನಿಲ್ಲಿಸಬಹುದು. ಈ ಟೆಕ್ನಿಕ್ ನಿಮಗೆ ಎಲ್ಲರ ಮುಂದೆ ಮುಜುಗರ ಉಂಟು ಮಾಡುವುದನ್ನು ತಡೆಯುತ್ತದೆ. ಹಾಗಾದರೆ ಬಿಕ್ಕಳಿಕೆ ಬಂದಾಗ ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಬಿಕ್ಕಳಿಕೆ (Hiccup) ಯಾರಿಗೆ ಬರಲ್ಲ ಹೇಳಿ? ಅದರಲ್ಲಿಯೂ ಈ ಬಿಕ್ಕಳಿಕೆ ಯಾರನ್ನೂ ಹೇಳಿ, ಕೇಳಿ ಬರುವಂತದ್ದಲ್ಲ. ಆದರೆ ಅವು ಬಂದಾಗ ಎಲ್ಲರ ಮುಂದೆ ಮುಜುಗರ ಆಗುವುದು ಮಾತ್ರ ತಪ್ಪುವುದಿಲ್ಲ. ಏಕೆಂದರೆ ಇದು ಯಾವಾಗ ಬೇಕಾದರೂ ಬರಬಹುದು, ಜೊತೆಗೆ ಇದು ಬಂದಾಗ ಸುತ್ತಮುತ್ತಲಿರುವವರು ನಮ್ಮನ್ನು ನೋಡುವುದರಿಂದ ಸಹಜವಾಗಿ ಏನು ಮಾಡಬೇಕು ಎಂಬುದೇ ತಿಳಿಯುವುದಿಲ್ಲ. ಕೆಲವರು ಬಿಕ್ಕಳಿಕೆ ಬಂದಾಗ ತಕ್ಷಣ ನೀರು (Water) ಕುಡಿಯುತ್ತಾರೆ, ಇನ್ನು ಕೆಲವರು ಸಕ್ಕರೆ(Sugar) ಯನ್ನು ಬಾಯಿಗೆ ಹಾಕಿಕೊಳ್ಳುತ್ತಾರೆ. ಹಗಲಿನಲ್ಲಿ ಈ ರೀತಿ ಬಿಕ್ಕಳಿಕೆ ಬಂದರೆ ಪರವಾಗಿಲ್ಲ. ಆದರೆ ರಾತ್ರಿ ಸಮಯದಲ್ಲಿ ಈ ರೀತಿಯಾದಾಗ ಏನು ಮಾಡಬೇಕು? ಅದಕ್ಕೂ ಮೊದಲು ಈ ರೀತಿ ಬಿಕ್ಕಳಿಕೆ ಏಕೆ ಬರುತ್ತದೆ (Hiccups Causes)? ಅದಕ್ಕೆ ಕಾರಣವೇನು? ಇದನ್ನು ಕಡಿಮೆ ಮಾಡಲು ಯಾವ ರೀತಿ ಸಲಹೆಗಳನ್ನು ಪಾಲಿಸಬೇಕು ಎಂಬುದನ್ನು ತಿಳಿದುಕೊಳ್ಳಿ.
ಬಿಕ್ಕಳಿಕೆ ಏಕೆ ಬರುತ್ತೆ ಗೊತ್ತಾ?
ಬಿಕ್ಕಳಿಕೆ ತುಂಬಾ ಸಾಮಾನ್ಯ. ದೇಹದಲ್ಲಿನ ಡಯಾಫ್ರಾಮ್ ಸ್ನಾಯುವಿನ ಸಮಸ್ಯೆಗಳಿಂದ ಅವು ಸಂಭವಿಸುತ್ತವೆ. ಇದು ನಮ್ಮ ಉಸಿರಾಟಕ್ಕೆ ಸಂಬಂಧಿಸಿದ್ದು. ಈ ಸ್ನಾಯು ಇದ್ದಕ್ಕಿದ್ದಂತೆ ಸಂಕುಚಿತಗೊಂಡಾಗ ಬಿಕ್ಕಳಿಕೆ ಉಂಟಾಗುತ್ತದೆ. ಆದರೆ ಬಿಕ್ಕಳಿಕೆ ಬರುವುದಕ್ಕೆ ಇದೊಂದೇ ಕಾರಣವಲ್ಲ. ಬಿಕ್ಕಳಿಕೆಗೆ ಕಂಡುಬರುವುದಕ್ಕೆ ಹಲವು ಕಾರಣಗಳಿವೆ. ಆಹಾರವನ್ನು ಬೇಗನೆ ತಿನ್ನುವುದು ಅಥವಾ ವೇಗವಾಗಿ ನೀರನ್ನು ಕುಡಿಯುವುದರಿಂದ ಹೊಟ್ಟೆಗೆ ಸಾಕಷ್ಟು ಗಾಳಿ ಪ್ರವೇಶಿಸಬಹುದು. ಸೋಡಾ ಮತ್ತು ಬಿಯರ್‌ನಂತಹ ಹೆಚ್ಚು ಕಾರ್ಬೊನೇಟೆಡ್ ಪಾನೀಯಗಳನ್ನು ಕುಡಿಯುವುದರಿಂದಲೂ ಬಿಕ್ಕಳಿಕೆ ಬರಬಹುದು. ಜೊತೆಗೆ ಹೆಚ್ಚು ಹಸಿವಾಗಿದ್ದಾಗ ಒಮ್ಮೆಲೇ ತಿನ್ನುವುದರಿಂದಲೂ ಬಿಕ್ಕಳಿಕೆ ಬರಬಹುದು. ಹೆಚ್ಚುವರಿಯಾಗಿ, ಮಸಾಲೆಯುಕ್ತ ಆಹಾರವನ್ನು ಸೇವಿಸುವುದು, ಧೂಮಪಾನ ಮಾಡುವುದು ಮತ್ತು ಒತ್ತಡ ಅಥವಾ ಆತಂಕದಿಂದ ಬಳಲುವುದು ಸಹ ಬಿಕ್ಕಳಿಗೆ ಕಾರಣವಾಗಬಹುದು.
ಬಿಕ್ಕಳಿಕೆ ಕಡಿಮೆ ಮಾಡಲು ಇಲ್ಲಿವೆ ಸಲಹೆಗಳು:
ಬಿಕ್ಕಳಿಕೆ ಕಡಿಮೆ ಮಾಡಲು ಗಂಟಲಿನಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳಿ. ಈ ರೀತಿ ಮಾಡುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ತಣ್ಣೀರು ಕುಡಿಯುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಬಿಕ್ಕಳಿಕೆಯನ್ನು ತ್ವರಿತವಾಗಿ ನಿವಾರಿಸಲು, ಬಾಯಿಗೆ ಸ್ವಲ್ಪ ಸಕ್ಕರೆ ಹಾಕಿ ಅದನ್ನು ನಿಧಾನವಾಗಿ ಅಗಿಯಿರಿ.
ಅನ್ನ ತಿನ್ನುವುದರಿಂದ ಬಿಕ್ಕಳಿಕೆ ಕಡಿಮೆಯಾಗುತ್ತದೆ.
ಮುಖವನ್ನು ತಣ್ಣೀರಿನಿಂದ ತೊಳೆಯುವುದು, ಹಾಗೆಯೇ ಕೆಲವು ಸೆಕೆಂಡುಗಳ ಕಾಲ ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು ಸಹ ಬಿಕ್ಕಳಿಕೆಯನ್ನು ನಿಯಂತ್ರಿಸಬಹುದು.
ಬಾಯಿಯಲ್ಲಿ ಐಸ್ ಕ್ಯೂಬ್ ಅನ್ನು ಇಟ್ಟು ನಿಧಾನವಾಗಿ ಅಗಿಯುವುದರಿಂದ ಬಿಕ್ಕಳಿಕೆಯಿಂದ ಪರಿಹಾರ ಸಿಗುತ್ತದೆ.
ಬೆಳ್ಳುಳ್ಳಿಯ ಎಸಳು ತಿನ್ನುವುದು ಅಥವಾ ಒಂದು ಚಮಚ ನಿಂಬೆ ರಸವನ್ನು ಸೇವನೆ ಮಾಡುವುದರಿಂದಲೂ ಸಹ ಬಿಕ್ಕಳಿಕೆಯನ್ನು ಕಡಿಮೆ ಮಾಡಬಹುದು.