ನವದೆಹಲಿ : ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾದ ಬಳಿಕ ಡೊನಾಲ್ಡ್ ಟ್ರಂಪ್ ವಿಶ್ವಕ್ಕೆ ಸುಂಕ ಸಮರ ಸಾರಿದ್ದು, ಅದರಲ್ಲೂ ಚೀನಾದಿಂದ ಅಮೆರಿಕಾಗೆ ಆಮದಾಗುವ ಎಲ್ಲಾ ವಸ್ತುಗಳ ಮೇಲಿನ ಸುಂಕದ ಸಮರದಿಂದ ಚೀನಾ ಕಂಗಾಲಾಗಿದೆ.
ಚೀನಾದ ವಸ್ತುಗಳ ಮೇಲೆ ಶೇ.125 ತೆರಿಗೆ ಹಾಕಿರುವ ಅಮೆರಿಕಾದ ಸಹವಾಸವೇ ಬೇಡ ಎಂಬಂತೆ,ಈ ನಿಟ್ಟಿನಲ್ಲಿ ಹಲವಾರು ಚೀನಾ ಎಲೆಕ್ಟ್ರಾನಿಕ್ ಘಟಕ ತಯಾರಕರು ಭಾರತೀಯ ಕಂಪನಿಗಳಿಗೆ ಶೇ.5ರಷ್ಟು ರಿಯಾಯಿತಿಗಳನ್ನು ನೀಡಲು ಆರಂಭಿಸಿದ್ದಾರೆ ಎಂದು ವರದಿಯಾಗಿದೆ.
ಹೀಗಾಗಿ ಮುಂದಿನ ದಿನಗಳಲ್ಲಿ ಮೊಬೈಲ್, ಟಿವಿ, ಫ್ರಿಡ್ಜ್ ಸೇರಿದಂತೆ ಚೀನಾದಿಂದ ಬರುವ ಬಹುತೇಕ ಎಲೆಕ್ಟ್ರಾನಿಕ್ಸ್ ವಸ್ತುಗಳ ಬೆಲೆಯು ಭಾರತದಲ್ಲಿ ಭಾರೀ ಪ್ರಮಾಣದಲ್ಲಿ ಇಳಿಕೆಯಾಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚೀನಾ-ಅಮೆರಿಕ ನುಡುವಿನ ಸುಂಕದ ಸಮರದಿಂದ ಚೀನಾಗೆ ವ್ಯಾಪಾರ ಉದ್ವಿಗ್ನತೆ ಎದುರಾಗಿದೆ. ಹೀಗಾಗಿ ರಿಯಾಯಿತಿ ದರದಲ್ಲಿ ಭಾರತಕ್ಕೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಸರಬರಾಜು ಮಾಡಲು ಚೀನಾ ಮುಂದಾಗಿದೆಯಂತೆ.
ಆರಂಭದಲ್ಲಿ ಚೀನಾವು ಅಮೆರಿಕದ ವಸ್ತುಗಳಿಗೆ ಶೇ.67 ತೆರಿಗೆ ಹಾಕಿತ್ತು. ಈ ಕಾರಣಕ್ಕೆ ಟ್ರಂಪ್ ಕಳೆದ ಏ.2 ರಂದು ಚೀನಾ ವಸ್ತುಗಳಿಗೆ ಶೇ. 34 ಸುಂಕ ವಿಧಿಸುವುದಾಗಿ ಘೋಷಣೆ ಮಾಡಿದ್ದರು. ಹೀಗೆ ಜಿದ್ದಾಜಿದ್ದಿನಂತೆ ಸುಂಕದ ಸಮರ ಮುಂದುವರಿಯಿತು.
ಇತ್ತ ಸಿಟ್ಟಾದ ಚೀನಾ, ಅಮೆರಿಕದ ವಸ್ತುಗಳ ಮೇಲೆ ಶೇ.84 ಸುಂಕ ಘೋಷಿಸಿತು. ಇದಕ್ಕೆ ಸಿಡಿದೆದ್ದ ಟ್ರಂಪ್ ಮತ್ತೆ ಚೀನಾದ ವಸ್ತುಗಳ ಮೇಲೆ ಶೇ.125 ತೆರಿಗೆ ಹಾಕಿದರು. ಹೀಗಾಗಿ ಅಮೆರಿಕಾದ ಸುಂಕ ಸಮರಕ್ಕೆ ಹೆದರಿದ ಚೀನಾ, ಭಾರತಕ್ಕೆ ರಿಯಾತಿ ದರದಲ್ಲಿ ತನ್ನ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಾರಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.