ಬಾಗಲಕೋಟೆ : ನೀರಿನಲ್ಲಿ ಮುಳುಗುತ್ತಿದ್ದ ಯುವಕನೋರ್ವನನ್ನು ರಕ್ಷಿಸಲು ಹೋಗಿ ಸೈನಿಕ ಸೇರಿ ಇಬ್ಬರು ಸಾವನ್ನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮಣ್ಣೇರಿ ಗ್ರಾಮದ ಮಲಪ್ರಭಾ ನದಿಯಲ್ಲಿ ಹಂಸನೂರ ಗ್ರಾಮದ ಶೇಖಪ್ಪ ಮುತ್ತಪ್ಪ ಮೂಲಿಮನಿ(15) ಎಂಬಾತ ನದಿಯಲ್ಲಿ ಸ್ನಾನ ಮಾಡಲು ಹೋಗಿದ್ದ, ಈ ವೇಳೆ ಕಾಲು ಗುಂಡಿಗೆಯತ್ನ ಹೋಗಿದ್ದಾನೆ.ಕೂಡಲೇ ರಕ್ಷಣೆಗಾಗಿ ಕೂಗಿದ್ದಾನೆ.
ಈ ವೇಳೆಗೆ ಅದೇ ಮಾರ್ಗದಲ್ಲಿ ಗದಗ ಜಿಲ್ಲೆಯ ರೋಣ ತಾಲೂಕಿನ ಬೆನಹಾಳ ಗ್ರಾಮದ ಸೈನಿಕ ಮಹಾಂತೇಶ ಹೂವಪ್ಪ ಹೊಸಮನಿ(25) ಸಾಗುತ್ತಿದ್ದರು. ಬಾಲಕನ ಕಿರುಚಾಟ ಕೇಳಿ ರಕ್ಷಣೆಗೆಂದು ನದಿಗೆ ಹಾರಿದ್ದಾರೆ.
ಆಗ ಈಜು ಬಾರದ ಶೇಖಪ್ಪ ಭಯದಿಂದ ಮಹಾಂತೇಶ ಅವರ ಕುತ್ತಿಗೆಯನ್ನು ಗಟ್ಟಿಯಾಗಿ ಹಿಡಿದಿದ್ದಾನೆ. ಇದರಿಂದ ಮಹಾಂತೇಶಗೆ ಕೂಡ ಈಜಲು ಸಾಧ್ಯವಾಗದೇ ಇಬ್ಬರು ಕೂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.
ಸದ್ಯ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಎರಡು ಮೃತದೇಹವನ್ನು ಹೊರ ತೆಗೆದಿದ್ದು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಾದಾಮಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.