ಬಾಗಲಕೋಟೆ : ಹೇರ್ ಡ್ರೈಯರ್ ಬ್ಲಾಸ್ಟ್ ಆಗಿ ಮೃತ ಯೋಧನ ಪತ್ನಿಯ ಎರಡು ಮುಂಗೈಗಳು ತುಂಡಾಗಿರುವ ಘಟನೆ ಇಳಕಲ್ ನಗರದಲ್ಲಿ ನಡೆದಿದೆ.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಮೃತ ಸೈನಿಕ ಪಾಪಣ್ಣ ಮಾಜೋ ಅವರ ಪತ್ನಿ ಬಸಮ್ಮ ಯರನಾಳ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
2017 ರಲ್ಲಿ ಪಾಪಣ್ಣ ಮೋಜೋ ಜಮ್ಮು ಕಾಶ್ಮೀರದಲ್ಲಿ ಮೃತಪಟ್ಟಿದ್ದರು. ಮೃತ ಯೋಧನ ಪತ್ನಿ ಶಶಿಕಲಾ ಅವರ ನೆರೆಮನೆಯಲ್ಲಿ ಬಸಮ್ಮ ವಾಸಿಸುತ್ತಿದ್ದರು. ಶಶಿಕಲಾ ಅವರ ಹೆಸರಿಗೆ ಡಿಟಿಡಿಸಿ ಕೊರಿಯರ್ ಮೂಲಕ ಪಾರ್ಸೆಲ್ ಬಂದಿತ್ತು.
ಆದರೆ ಅವರು ಊರಿನಲ್ಲಿಲ್ಲದ ಕಾರಣ ಅದನ್ನು ಸ್ವೀಕರಿಸುವಂತೆ ಬಸಮ್ಮ ಅವರಿಗೆ ಹೇಳಿದ್ದರು. ಕೊರಿಯರ್ ಡೆಲಿವರಿ ಮಾಡುವಾತ ಮನೆಗೆ ಬಂದಾಗ ಅದನ್ನು ಸ್ವಿಚ್ ಹಾಕಿ ಆನ್ ಮಾಡಿ ಪರೀಕ್ಷಿಸಿಲು ಯತ್ನಿಸಿದಾಗ ಹೇರ್ ಡ್ರೈಯರ್ ಏಕಾಏಕಿ ಸ್ಫೋಟಗೊಂಡಿತ್ತು. ಕೂಡಲೇ ಅವರನ್ನು ಅಕ್ಕಪಕ್ಕದ ಮನೆಯವರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶಶಿಕಲಾ ಅವರೂ ಸಹ ಈ ಹೇರ್ ಡ್ರೈಯರ್ ಗೆ ಆರ್ಡರ್ ಮಾಡೇ ಇರಲಿಲ್ಲ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದ್ದು, ಉದ್ದೇಶಪೂರ್ವಕವಾಗಿ ಈ ಕೃತ್ಯ ನಡೆದಿರಬಹುದೇ ಎಂಬ ಗುಮಾನಿ ಉದ್ಭವಿಸಿದೆ.
ವಿಶಾಖಪಟ್ಟಣದ ಮೂಲದ ಉತ್ಪಾದಕರು ತಯಾರಿಸಿರುವ ಈ ಹೇರ್ ಡ್ರೈಯರ್ ಅನ್ನು ಕಳುಹಿಸಿದವರು ಯಾರು, ಇದಕ್ಕೆ ಹಣವನ್ನು ಪಾವತಿಸಿದವರು ಯಾರು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು. ಇಳಕಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.