ಈ ಸಿನಿಮಾ ಎಂಬ ಬಣ್ಣದ ಲೋಕದಲ್ಲಿ ಹೆಸರು ಮಾಡೋದು ಅಷ್ಟು ಸುಲಭದ ಮಾತಲ್ಲ. ಜನಪ್ರಿಯತೆ ಜೊತೆಗೆ ಟೀಕೆ, ಅಡೆತಡೆಗಳನ್ನೂ ಎದುರಿಸಬೇಕಾಗುತ್ತದೆ. ವೈಯಕ್ತಿಕ ಜೀವನ ಆನ್ಲೈನ್ನಲ್ಲಿ ಚರ್ಚೆಗೊಳಪಡುತ್ತವೆ. ಕೆಲವರ ಹೆಸರು ಅವರಿಗೆ ಸಂಬಂಧಪಡದ ವಿಚಾರದೊಳಗೆ ಸಿಲುಕಿ ಸಮಸ್ಯೆ ಎದುರಿಸುತ್ತಾರೆ. ಅದರಲ್ಲೂ ಬೆಳೆಯುತ್ತಿರುವ ಕಲಾವಿದರು ಇಂಥ ಅಡೆತಡೆಗಳಿಗೆ ಒಳಗಾಗೋದುಂಟು.

ಇದೀಗ ಕಿರುತೆರೆ ಲೋಕದಲ್ಲಿ ತಮ್ಮದೇ ಆದ ಐಡೆಂಟಿಟಿ ಹೊಂದಿರುವ, ನಾಗಿಣಿ ಧಾರಾವಾಹಿ ಮೂಲಕ ಹೆಚ್ಚು ಖ್ಯಾತಿ ಹಾಗೂ ಬಿಗ್ಬಾಸ್ ಮೂಲಕ ಜನಪ್ರಿಯತೆ ಹೆಚ್ಚಿಸಿಕೊಂಡಿರುವ ನಮ್ರತಾ ಗೌಡ ಅವರು ಸೋಷಿಯಲ್ ಮೀಡಿಯಾ ಬಳಕೆದಾರನೋರ್ವನ ಮೆಸೇಜ್ಗಳಿಂದ ಮಾನಸಿಕ ಕಿರುಕುಳಕ್ಕೆ ಒಳಗಾಗಿದ್ದಾರೆ.
ಬಾಲ ನಟಿಯಾಗಿ ಬೆಳೆದ ಇವರು ಹಲವು ಒಳ್ಳೊಳ್ಳೆ ಅವಕಾಶ ಪಡೆದುಕೊಂಡರು. ಜೊತೆಗೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೋರ್ವನ ವಿರುದ್ಧ ಸಿಡಿದೆದ್ದಿದ್ದಾರೆ.
ಸಾಮಾಜಿಕ ಜಾಲತಾಣ ಬಳಕೆದಾರನೋರ್ವ ಇನ್ಸ್ಟಾಗ್ರಾಮ್ ಖಾತೆಯಿಂದ ನಮ್ರತಾ ಅವರಿಗೆ ಕೆಲ ಅಶ್ಲೀಲ ಸಂದೇಶಗಳನ್ನು ಕಳುಸಿದ್ದಾನೆ. ತನಗೆ ಸಾಕಷ್ಟು ರಾಜಕಾರಣಿಗಳ ಜೊತೆಗೆ ನಂಟು ಇದ್ದು, ಪೇಯ್ಡ್ ಡೇಟಿಂಗ್ಗೆ ಆಹ್ವಾನ ಕೊಟ್ಟಿದ್ದಾರೆ. ತೆಗೆದುಕೊಳ್ಳುವ ಶುಲ್ಕವನ್ನು ಹೇಳುವಂತೆಯೂ ಮೆಸೇಜ್ ಮಾಡಿದ್ದಾನೆ.
ನಟಿ ಶೇರ್ ಮಾಡಿರೋ ಮೆಸೇಜ್ನ ಸ್ಕ್ರೀನ್ಶಾಟ್ನಲ್ಲಿ, ನನಗೆ ರಾಜಕಾರಣಿಗಳು, ವಿಐಪಿಗಳೊಟ್ಟಿಗೆ ನಂಟಿದೆ. ನಾನು ಅವರಿಗಾಗಿ ಪೇಯ್ಡ್ ಡೇಟಿಂಗ್ಗಳನ್ನು ಅರೇಂಜ್ ಮಾಡುತ್ತಿರುತ್ತೇನೆ. ನೀವು ಪೇಯ್ಡ್ ಡೇಟಿಂಗ್ ಮಾಡುವ ಆಲೋಚನೆ ಇದ್ರೆ ನಿಮ್ಮ ಶುಲ್ಕ ಹೇಳಿ. ನಿಮ್ಮ ಮೊಬೈಲ್ ನಂಬರ್ ಅಥವಾ ಫೋಟೋಗಳನ್ನು ಕಳುಹಿಸುವ ಅಗತ್ಯ ಇಲ್ಲ. ನೀವು ಹೆಚ್ಚಿನ ಶುಲ್ಕ ಕೇಳಿದರೂ ಅದನ್ನು ಕೊಡಲು ಸಿದ್ಧ ಇದ್ದೇವೆ. 200% ಎಲ್ಲವೂ ಖಾಸಗಿಯಾಗಿ ಇರುತ್ತದೆ. ಯಾವುದು ಸಹ ಬಹಿರಂಗವಾಗುವುದಿಲ್ಲ. ನಿಮಗೆ ಆಸಕ್ತಿ ಇದ್ದರೆ ಮಾಹಿತಿಯನ್ನು ಹಂಚಿಕೊಳ್ಳಿ ಎಂದು ಇದೇ ಸಂದೇಶವನ್ನು ಎರಡು ಮೂರು ಬಾರಿ ನಮ್ರತಾಗೆ ಕಳುಹಿಸಿದ್ದಾನೆ.
ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ನಮ್ರತಾ ಗೌಡ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಮೆಸೇಜ್ನ ಸ್ಕ್ರೀನ್ಶಾಟ್ ಹಂಚಿಕೊಂಡಿದ್ದಾರೆ. ಈ ಸ್ಕ್ರೀನ್ಶಾಟ್ ಮೇಲೆ, ”ಗೌರವಗಳೊಂದಿಗೆ, ನೀವಿದನ್ನು ನಿಲ್ಲಿಸಬೇಕು” ಎಂದು ಬರೆದುಕೊಂಡಿದ್ದಾರೆ. ಆದರೆ, ಯಾವುದೇ ಕಾನೂನು ಕ್ರಮ ಜರಗಿಸಲು ನಮ್ರತಾ ಗೌಡ ಇನ್ನೂ ಮುಂದಾಗಿಲ್ಲ.




