ಬೆಳಗಾವಿ: ವಿವಿಧ ಕಾಲುವೆಗಳಲ್ಲಿ ಹರಿಯುತ್ತಿರುವ ನೀರಿನ ಪ್ರಮಾಣವನ್ನು ಇಂದು ಖುದ್ದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಪರಿಶೀಲನೆ ನಡೆಸಿ ಅಂತಿಮ ಹಂತದವರೆಗೆ ನೀರು ತಲುಪುವಂತೆ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ನಂತರ ಮೂಡಲಗಿ ತಾಲುಕಿನ ಕಲ್ಲೋಳಿ ಹಾಗೂ ನಾಗನೂರ ಪಟ್ಟಣದ ಹಳ್ಳ, ಮುಗಳಖೋಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಲುವೆಗಳು ಹಾಗೂ ಬಾಗಲಕೋಟೆ ಜಿಲ್ಲೆಯ ಚುಮ್ಮಡ ಗ್ರಾಮದಲ್ಲಿ ಘಟಪ್ರಭಾ ಎಡದಂಡೆ ಕಾಲುವೆಗಳ ವೀಕ್ಷಣೆ ನಡೆಸಿದ ಸಚಿವರು, ನಂತರ ಮಹಾಲಿಂಗಪುರದಲ್ಲಿ ಎಲ್ಲಾ ನೀರಾವರಿ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ, ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ, ಕಾಲುವೆಯ ಅಂತಿಮ ಘಟ್ಟದವರೆಗೂ ನೀರು ತಲುಪುವಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೂ ಮೊದಲು ಮುಗಳಖೋಡ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಕಾಲುವೆ ನೀರಿನ ಹರಿವನ್ನು ವೀಕ್ಷಿಸಿ, ಅಂತಿಮ ಹಂತದವರೆಗೆ ನೀರು ತಲುಪುವಂತೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಂತರ ಮೂಡಲಗಿಯ ತಾಲೂಕಿನ ಕಲ್ಲೋಳಿ ಹಾಗೂ ನಾಗನೂರ ಪಟ್ಟಣದ ಹಳ್ಳದ ಪರಿಶೀಲನೆಯನ್ನು ನಡೆಸಿ, ಹೆಚ್ಚುವರಿ ನೀರು ಹರಿದು ಹೋಗುತ್ತಿದ್ದರಿಂದ ಕೆಇಬಿ ಅಧಿಕಾರಿಗಳಿಗೆ ಹಳ್ಳದ ಸುತ್ತಮುತ್ತಲಿನ ರೈತರ ಹೊಲಗಳಿಗೆ ಹೆಚ್ಚು ಸಮಯ ಕರೆಂಟ್ ನೀಡಲು ತಿಳಿಸಿದರು.
ನೀರು ಪೋಲಾಗದಂತೆ ಎಚ್ಚರಿಕೆ ವಹಿಸಿ: ಈಗಾಗಲೇ ಬಿಸಿಲಿನಿಂದ ಹಳ್ಳಗಳು ಹಾಗೂ ಕೊಳವೆ ಬಾವಿಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ, ಕಾಲುವೆ ನೀರು ಅಂತಿಮ ಹಂತದವರೆಗೆ ತಲುಪುವವರೆಗೆ ನೀರು ನಿರಂತರವಾಗಿ ಹರಿಯುವಂತೆ ಕ್ರಮ ಕೈಗಳ್ಳಬೇಕು. ಅಲ್ಲದೇ ಬಹುತೇಕ ಕಾಲುವೆಗಳಲ್ಲಿ ಹೂಳು ಮತ್ತು ಗಿಡಗಂಟಿ ಇರುವದರಿಂದ ನೀರು ಸರಾಗವಾಗಿ ಹರಿಯದ ಹಿನ್ನೆಲೆಯಲ್ಲಿ ತಾಲ್ಲೂಕಿನ ಎಲ್ಲಾ ಕೆರೆಕಟ್ಟೆಗಳನ್ನು ತುಂಬಿಸುವ ಗುರುತರವಾದ ಜವಾಬ್ದಾರಿ ಅಧಿಕಾರಿಗಳದ್ದಾಗಿದೆ. ಆದ್ದರಿಂದ ತಾಂತ್ರಿಕ ಕಾರಣ ನೀಡದೆ ಎಲ್ಲಾ ಕಾಲುವೆಗಳಲ್ಲಿ ಬೆಳೆದಿರುವ ಗಿಡಗಂಟಿ ಸ್ವಚ್ಛಗೊಳಿಸಿ ಮತ್ತು ತುಂಬಿರುವ ಮಣ್ಣನ್ನು ತೆಗೆಸಿ ಸರಾಗವಾಗಿ ನೀರು ಹರಿಯಲು ಕ್ರಮ ವಹಿಸಬೇಕು. ಮುಖ್ಯವಾಗಿ ಈ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಸೂಚನೆ ನೀಡಿದರು.
ಇದೇ ವೇಳೆ ಮಾಜಿ ಶಾಸಕ ಶಾಮ್ ಘಾಟಗೆ, ವಿವಿಧ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ಇದ್ದರು.
ಪ್ರತೀಕ್ ಚಿಟಗಿ