ಸಿರುಗುಪ್ಪ : ನಗರದ ತರಕಾರಿ ಮಾರುಕಟ್ಟೆಯಲ್ಲಿ ನೂತನವಾಗಿ ನಿರ್ಮಿತಗೊಂಡ ವಾಣಿಜ್ಯ ಮಳಿಗೆಗಳಲ್ಲಿ ನಡೆಯುತ್ತಿರುವ ಅನೈತಿಕ ಚಟುವಟಿಕೆಗಳನ್ನು ತಡೆಗಟ್ಟಿ ಸೂಕ್ತ ನಿರ್ವಹಣೆಗೆ ಒತ್ತಾಯಿಸಿ ಕರ್ನಾಟಕ ರಕ್ಷಣಾಪಡೆ ವತಿಯಿಂದ ಶಿರಸ್ತೆದಾರ ಸಿದ್ದಾರ್ಥ್ ಅವರ ಮೂಲಕ ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ರಕ್ಷಣಾ ಪಡೆಯ ಜಿಲ್ಲಾಧ್ಯಕ್ಷ ಡಿ.ನೂರ್‌ಸಾಬ್ ಮಾತನಾಡಿ ತರಕಾರಿ ಮಾರುಕಟ್ಟೆಯಲ್ಲಿ 95ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನೂತನ ಮಳಿಗೆಗಳನ್ನು ನಿರ್ಮಿಸಿ ಐದಾರು ವರ್ಷಗಳೇ ಕಳೆದರೂ ಉದ್ಘಾಟನೆಗೊಳ್ಳದೇ ನಿರುಪಯುಕ್ತವಾಗಿವೆ.
ಅವೈಜ್ಞಾನಿಕ ನಿರ್ಮಾಣವೋ ಅಥವಾ ನಿರ್ವಹಣೆ ಅಸಾಧ್ಯವೋ ತಿಳಿಯದಾಗಿದ್ದು, ಸಣಪುಟ್ಟ ವ್ಯಾಪಾರಿಗಳಿಗಾದರೂ ಬಾಡಿಗೆ ಅಥವಾ ಲೀಸ್ ನೀಡದ ಕಾರಣ ನಿರುಪಯುಕ್ತ ಮಳಿಗೆಗಳಲ್ಲಿ ಮದ್ಯಪಾನಿಗಳು, ಇನ್ನಿತರ ಅನೈತಿಕ ಚಟುವಟಿಕೆಗಳು ನಡೆಯುತ್ತಿವೆ.
ಅಲ್ಲದೇ ಮಾರುಕಟ್ಟೆಯಲ್ಲಿ ಸೂಕ್ತ ಕಸದ ನಿರ್ವಹಣೆಯಿಲ್ಲದ ಕಾರಣ ಎಲ್ಲೆಂದರೆಲ್ಲಿ ವ್ಯರ್ಥ ಮಾಂಸದ ತ್ಯಾಜ್ಯ, ಕೊಳೆತ ತರಕಾರಿ, ಮದ್ಯದ ಬಾಟಲ್‌ಗಳಿಂದ ಕಸದ ಕೊಂಪೆಯಾಗಿದೆ.
ಆದ್ದರಿಂದ ತಾವುಗಳು ಸಂಬಂದಿಸಿದ ಇಲಾಖೆಗೆ ಆದೇಶಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಆಗ್ರಹಿಸಿದರು. ಇದೇ ವೇಳೆ ಯುವಕರಾದ ಖಾಸೀಂ.ಹಳೆಕೋಟೆ, ವಸೀಂ ಅಕ್ರಮ್ ಇದ್ದರು.
ವರದಿ : ಶ್ರೀನಿವಾಸ ನಾಯ್ಕ




