ತುರುವೇಕೆರೆ: ಹೇಮಾವತಿ ಎಕ್ಸ್ ಪ್ರೆಸ್ ಕೆನಾಲ್ ವಿರುದ್ಧದ ಹೋರಾಟಕ್ಕೆ ನಾನು ಬಂದರೆ ನನ್ನ ಗೂಟದ ಕಾರು ಕಿತ್ತು ಹಾಕುತ್ತಾರೆ, ಆದ್ದರಿಂದ ನಾನು ಹೋರಾಟಕ್ಕೆ ಬರಲು ಸಾದ್ಯವಿಲ್ಲ ಎಂದು ಜಿಲ್ಲೆಯ ಜನಪ್ರತಿನಿಧಿಗಳಿಗೆ ಹೇಳಿದ್ದೀನಿ ಎಂದು ತುಮಕೂರು ಜಿಲ್ಲಾ ಸಂಸದ, ಕೇಂದ್ರ ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅಸಹಾಯಕತೆ ವ್ಯಕ್ತಪಡಿಸಿದರು.
ಪಟ್ಟಣದ ಕೆ.ಹಿರಣ್ಣಯ್ಯ ಬಯಲು ರಂಗಮಂದಿರದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೇಂದ್ರ ಸರ್ಕಾದರ ವಿಶೇಷ ಅಡಿಪ್ ಯೋಜನೆಯಡಿ ದಿವ್ಯಾಂಗರಿಗೆ ಉಚಿತ ಸಾಧನ ಸಲಕರಣೆಗಳ ವಿತರಿಸಿ ಮಾತನಾಡಿದ ಅವರು, ಜಿಲ್ಲೆಯ ಜನರ ಆರ್ಶೀವಾದದಿಂದ ಸಂಸದನಾಗಿದ್ದೇನೆ. ತುಮಕೂರು ಜಿಲ್ಲೆಯ ಪಾಲಿಗೆ ಮರಣಶಾಸನವಾಗಿರುವ ಹೇಮಾವತಿ ಎಕ್ಸ್ ಪ್ರೆಸ್ ಚಾನಲ್ ವಿರುದ್ಧದ ಹೋರಾಟದಲ್ಲಿ ಜಿಲ್ಲೆಯ ಸಂಸದರಾಗಿ, ಕೇಂದ್ರ ಸಚಿವರಾಗಿ ನೀವು ನಮ್ಮೊಂದಿಗೆ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲೆಯ ಜನಪ್ರತಿನಿಧಿಗಳು, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಎಲ್ಲರೂ ಒತ್ತಡ ಹೇರಿದ್ದಾರೆ. ಆದರೆ ನಾನು ಹೋರಾಟದಲ್ಲಿ ಪಾಲ್ಗೊಂಡರೆ ನನ್ನ ಗೂಟದ ಕಾರನ್ನು ಕಿತ್ತುಕೊಳ್ಳುತ್ತಾರೆ, ಆದ್ದರಿಂದ ಕೇಂದ್ರ ಸಚಿವನಾಗಿ ನಾನು ಹೋರಾಟದಲ್ಲಿ ಪಾಲ್ಗೊಳ್ಳಲು ಸಾಧ್ಯವಿಲ್ಲ ಎಂದಿದ್ದೇನೆ ಎಂದರು.
ಅಧಿಕಾರಿಗಳು ವಿಶೇಷಚೇತನರ ಕೆಲಸ ಕಾರ್ಯಗಳನ್ನು ಶೀಘ್ರ ಮಾಡಿಕೊಡಬೇಕು, ಅವರನ್ನು ಕಛೇರಿಗೆ ಅಲೆಸಬಾರದು ಎಂದ ಅವರು, ಸಂಸದರಾದ ನಂತರ ಮೊದಲ ಬಾರಿಗೆ ತಾಲೂಕಿನಲ್ಲಿ ಸವಲತ್ತು ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವುದು ಸಂತೋಷ ತಂದಿದೆ. ರಾಜಕೀಯವಾಗಿ ಸೋಮಣ್ಣ ಅಧ್ಯಾಯ ಮುಗಿಯಿತು ಎನ್ನುತ್ತಿರುವಾಗಲೇ ಜಿಲ್ಲೆಯ ಜನರು ಆರ್ಶೀವದಿಸಿ ಸಂಸದರನ್ನಾಗಿ ಮಾಡಿ ಪುನರ್ಜನ್ಮ ನೀಡಿದರು. ಜಿಲ್ಲೆಯ ಜನರ ಆರ್ಶೀವಾದದ ಬಲದಿಂದ ನರೇಂದ್ರ ಮೋದಿಯವರ ಸಂಪುಟದಲ್ಲಿ ಸಚಿವನಾಗಿ ಕರ್ತವ್ಯ ನಿರ್ವಹಣೆ ಮಾಡಲು ಅವಕಾಶ ಸಿಕ್ಕಿದ್ದು ನನ್ನ ಸೌಭಾಗ್ಯವಾಗಿದೆ. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆಂದರು.
ಕ್ಷೇತ್ರದ ತುರುವೇಕೆರೆ ಕೆರೆ ಅಭಿವೃದ್ದಿಗೆ ಕೇಂದ್ರ ಜಲಯೋಜನಾ ಸಚಿವರೊಂದಿಗೆ ಚರ್ಚಿಸಿ 50 ಕೋಟಿ ಅನುದಾನ ಒದಗಿಸಿಕೊಡುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಎಂ.ಡಿ. ಲಕ್ಷ್ಮೀನಾರಾಯಣ್, ತಿಪಟೂರು ಉಪವಿಭಾಗಾಧಿಕಾರಿ ಸಪ್ತಶ್ರೀ, ತಹಸೀಲ್ದಾರ್ ಕುಂಞ ಅಹಮದ್, ಇಒ ಶಿವರಾಜಯ್ಯ, ಬಿಇಒ ಸೋಮಶೇಖರ್, ಪಪಂ ಅಧ್ಯಕ್ಷೆ ಸ್ವಪ್ನ ನಟೇಶ್, ಉಪಾಧ್ಯಕ್ಷೆ ಭಾಗ್ಯ, ಸದಸ್ಯರಾದ ಆಶಾ, ಚಿದಾನಂದ್, ಅಂಜನ್ ಕುಮಾರ್, ಶೀಲಾ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್