ವಿದ್ಯಾರ್ಥಿ ಅಖಿಲ್ ಗೆ ಹಾವು ಕಡಿತ ಚಿಂತಾಜನಕ ಸ್ಥಿತಿ
ಶ್ರೀಸಾಯಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಕರ್ಮಕಾಂಡ ಬಟಾಬಯಲು
ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಕಣ್ಣಿದ್ದು ಕುರುಡು
ಲಕ್ಷ್ಮಿ ಆಸ್ಪತ್ರೆಯಲ್ಲಿ ಅಖಿಲ್ ಚಿಂತಾಜನಕ
ಮಾನ್ವಿ:ಶಾಲೆ ಸಹಿತ ಹಾಸ್ಟೆಲ್ ನಡೆಸಬೇಕಾದರೆ ಶಿಕ್ಷಣ ಇಲಾಖೆಯ ಮಾನದಂಡಗಳಂತೆ ಪರವಾನಗಿ ಪಡೆದಿರಬೇಕು.ಆದರೆ ಮಾನ್ವಿ ಪಟ್ಟಣದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸರಕಾರದ ನಿರ್ದೇಶನಗಳನ್ನೆ ಗಾಳಿಗೆ ತೂರಿ ವಸತಿ ಶಾಲೆ ಪ್ರಾರಂಭದ ಎಡವಟ್ಟಿನಿಂದಾಗಿ ಅಖಿಲ್ ಎಂಬ ಅಮಾಯಕ ವಿದ್ಯಾರ್ಥಿಗೆ ಹಾವು ಕಚ್ಚಿದ ಪರಿಣಾಮ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂದಿದೆ.
ಮಾನ್ವಿ ಪಟ್ಟಣದ ಯರಮಲದೊಡ್ಡಿ ರಸ್ತೆಯಲ್ಲಿರುವ ಶ್ರೀ ಸಾಯಿ ಇಂಟರ್ ನ್ಯಾಷನಲ್ ಪಬ್ಲಿಕ್ ಶಾಲೆಯ ಸುತ್ತಮುತ್ತ ಜಮೀನು ಇರುವ ಕಾರಣಕ್ಕಾಗಿ ವಿಷ ಜಂತುಗಳು ರಾತ್ರಿವೇಳೆ ಆಗಮಿಸುತ್ತಿವೆ ಎಂದು ಹಾಸ್ಟೆಲ್ ನಲ್ಲಿದ್ದ ವಿದ್ಯಾರ್ಥಿಗಳ ಆರೋಪವಾಗಿದೆ.
ಮಾನ್ವಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಅವರ ದುರಾಡಳಿತ ಯಾವ ರೀತಿ ಇದೆ ಎಂದು ಅನಧಿಕೃತ ಹಾಸ್ಟೆಲ್ ನಡೆದ ಪರಿಣಾಮ 4 ನೆ ತರಗತಿಯ ಅಖಿಲ್ ಎಂಬ ವಿದ್ಯಾರ್ಥಿ ಸಾವು ಬದುಕಿನ ನಡುವೆ ಲಕ್ಷ್ಮಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದೆ ಸಾಕ್ಷಿ.
ಅಖಿಲ್ ಎಂಬ ವಿದ್ಯಾರ್ಥಿಯ ಜೊತೆ ಹತ್ತಾರು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿರುವ ಟಿನ್ ಶೆಡ್ ನಲ್ಲಿಯೇ ಇರಬೇಕು.ಆದರೆ ಸರಕಾರದ ನಿರ್ದೇಶನಗಳನ್ನೆ ಗಾಳಿಗೆ ತೂರಿ ಆಡಳಿತ ಮಂಡಳಿ ವಸತಿ ಶಾಲೆಯನ್ನ ನಡೆಸುತ್ತಿದ್ದಾರೆ ಅಂದ ಮೇಲೆ ಇದರಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ ದೊಡ್ಡಮನಿ ಶಾಮೀಲಾಗಿದ್ದಾರೆಂದು ಹೋರಾಟಗಾರರ ಆರೋಪವಾಗಿದೆ.