ಪಾವಗಡ : ಅವೈಜ್ಞಾನಿಕವಾಗಿ ಕಸವನ್ನು ಕೆರೆಯಲ್ಲಿ ವಿಲೇವಾರಿಮಾಡಿ ಬೆಂಕಿ ಹಚ್ಚಿದ ಪರಿಣಾಮದಿಂದ ಪಕ್ಕದಲ್ಲಿಯೇ ಇದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಅಡಿಕೆ ತೋಟ ನಾಶವಾಗಿರುವ ಘಟನೆ ಅರಸಿಕೇರೆ ಗ್ರಾಮದಲ್ಲಿ ನಡೆದಿದೆ.
ತಾಲ್ಲೂಕಿನ ನಿಡಗಲ್ ಹೋಬಳಿಯ ಅರಸಿಕೆರೆ ಪಂಚಾಯಿತಿಯವರು ಅವೈಜ್ಞಾನಿಕವಾಗಿ ಕಸವನ್ನು ಕೆರೆಯ ಸಮೀಪದಲ್ಲಿ ರಾಶಿ ಮಾಡಿ ಬೆಂಕಿ ಹಚ್ಚಿರುವುದರಿಂದ ಭಾನುವಾರ ಸಂಜೆ 6:00 ಗಂಟೆಯ ಸಂದರ್ಭದಲ್ಲಿ ಈ ಬೆಂಕಿ ಅನಾಹುತ ಸಂಭವಿಸಿದೆ. ಇದೇ ಗ್ರಾಮದ ಸರ್ವೆ ನಂಬರ್ 314/3 ಕೆರೆಯ ಸಮೀಪದಲ್ಲಿರುವ ಬಿ.ಕೆ. ಮುನಿಸ್ವಾಮಿ ಎನ್ನುವವರ ಅಡಿಕೆ ತೋಟಕ್ಕೆ ಬೆಂಕಿ ಆವರಿಸಿ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.

ಈ ವೇಳೆ ಸಂತ್ರಸ್ತ ರೈತ ಬಿ ಕೆ ಮುನಿಸ್ವಾಮಿ ಮಾತನಾಡಿ, ನಮ್ಮ ತೋಟದ ಸಮೀಪ ಗ್ರಾಮ ಪಂಚಾಯಿತಿಯವರು ಸಂಗ್ರಹಿಸಿರುವಂತಹ ಕಸವನ್ನು ತಂದು ಸುರಿವುದರ ಜೊತೆಗೆ ಬೆಂಕಿ ಹಚ್ಚಿದ್ದಾರೆ. ಇದರಿಂದಾಗಿ ಪಕ್ಕದಲ್ಲಿ ಇರುವಂತಹ ನಮ್ಮ ತೋಟಕ್ಕೆ ಬೆಂಕಿ ಆವರಿಸಿದೆ. ಇದು ಎರಡನೇ ಬಾರಿ ಈ ರೀತಿಯ ಅವಘಡವಾಗಿದೆ, ಪಸಲಿಗೆ ಬಂದ 300 ಅಡಿಕೆ ಮರ, 50 ತೆಂಗಿನ ಮರ, ಹುಣಸೆ ಮರಗಳು ಬೋರ್ವೆಲ್ ಸೆಟ್, ಜೀವಾಮೃತ ಟ್ಯಾಂಕ್ ಬೆಂಕಿಯಲ್ಲಿ ಸುಟ್ಟು ಹೋಗಿದೆ, ಇದಕ್ಕೆಲ್ಲಾ ಗ್ರಾಮ ಪಂಚಾಯಿತಿಯ ಅವೈಜ್ಞಾನಿಕ ಕಸ ವಿಲೇವಾರಿ ಕಾರಣವಾಗಿದ್ದು, ಈ ಹಿಂದೆ ಹಲವು ಬಾರಿ ಗ್ರಾಮ ಪಂಚಾಯಿತಿಯ ಬಳಿ ಹೋಗಿ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ಮನವರಿಕೆ ಮಾಡಿಕೊಂಡರು ಯಾವುದೇ ಪ್ರಯೋಜನವಿಲ್ಲದೆ ಕೆರೆ ಅಂಗಳದಲ್ಲಿ ಕಸ ಸುರಿದು ಬೆಂಕಿ ಹಚ್ಚುತ್ತಿದ್ದಾರೆ. ಸಮೀಪದಲ್ಲಿಯೇ ಗೊಲ್ಲರಹಟ್ಟಿಯ ಮನೆಗಳಿದ್ದು ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ರು ಬಾರಿಯ ಅನಾಹುತ ಸಂಭವಿಸುತ್ತಿತ್ತು. ತಮಗಾದ ನಷ್ಟವನ್ನು ಗ್ರಾಮ ಪಂಚಾಯಿತಿ ನೀಡಬೇಕೆಂದು ಆಗ್ರಹಿಸಿದ್ದಾರೆ.
ಅಗ್ನಿಶಾಮಕದಳದ ಠಾಣಾಧಿಕಾರಿ ಅಖಂಡೇಶ್ ನೇತೃತ್ವದ ತಂಡ ಘಟನಾ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದೆ.
ಅರಸೀಕೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.
ವರದಿ: ಶಿವಾನಂದ




