ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ ನಾಗರಿಕ ಸೇವಾ ಪರೀಕ್ಷೆಯ ಅಂತಿಮ ಫಲಿತಾಂಶ ಇಂದು (ಏ.22) ಪ್ರಕಟವಾಗಿದ್ದು, ನೇಮಕಾತಿಗಾಗಿ ಆಯ್ಕೆಯಾದ ಅಭ್ಯರ್ಥಿಗಳ ಪಟ್ಟಿಯನ್ನು ಅಧಿಕೃತ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದೆ.
ಈ ಪೈಕಿ ವಾರಣಾಸಿಯ ಶಕ್ತಿ ದುಬೆ ಅಗ್ರಸ್ಥಾನ ಪಡೆದಿದ್ದಾರೆ.ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆ (ಸಿಎಸ್‌ಇ) 2024 ಕ್ಕೆ ಹಾಜರಾದ ಅಭ್ಯರ್ಥಿಗಳು ಈಗ http://upsc.gov.in ಅಧಿಕೃತ ವೆಬ್‌ಸೈಟ್‌ನಲ್ಲಿ ತಮ್ಮ ಫಲಿತಾಂಶವನ್ನು ನೋಡಬಹುದಾಗಿದೆ.
2024ನೇ ಸಾಲಿನ ಫಲಿತಾಂಶದಲ್ಲಿ 1,009 ಅಭ್ಯರ್ಥಿಗಳು ಅರ್ಹತೆ ಪಡಿದಿದ್ದು, ಮಾಹಿತಿ ಪ್ರಕಾರ 50ರ ಒಳಗಿನ ಶ್ರೇಯಾಂಕ ಪಡೆದು ಕರ್ನಾಟಕದ ಇಬ್ಬರು ವೈದ್ಯರು ಸಾಧನೆಗೈದಿದ್ದಾರೆ.ಡಾ. ರಂಗ ಮಂಜು 24ನೇ ಮತ್ತು ಡಾ. ಸಚಿನ್ ಹರಿ 41ನೇ ಸ್ಥಾನ ಪಡೆದಿದ್ದಾರೆ.
ಭಾರತದ ಅತ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್ಸಿ ಸಿಎಸ್‌ಇ ಪರೀಕ್ಷೆಯನ್ನು ಪ್ರತಿವರ್ಷ ಲಕ್ಷಾಂತರ ಆಕಾಂಕ್ಷಿಗಳು ಎದುರಿಸುತ್ತಾರೆ. 2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಇವರಲ್ಲಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು.
ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಇವರಲ್ಲಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಇವರಲ್ಲಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.