ಸಿರುಗುಪ್ಪ: ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ರಥೋತ್ಸವ ಅದ್ದೂರಿಯಾಗಿ ಜರುಗಿತು.
32 ವರ್ಷಗಳ ಹಿಂದೆ ಗ್ರಾಮದಲ್ಲಿ ಬೂದಿ ಮತ್ತು ಹಸಿರು ಮಿಶ್ರಿತ ಚಿಕ್ಕ ಚಿಕ್ಕ ಹಾವುಗಳು ಯಥೇಚ್ಚವಾಗಿ ಕಂಡುಬಂದಿದ್ದರಿಂದ ಗಾಬರಿಗೊಂಡ ಗ್ರಾಮಸ್ಥರು ಪರಿಹಾರಕ್ಕಾಗಿ ಹಲವು ಮಠಗಳ ಸ್ವಾಮೀಜಿಗಳ ಮೊರೆಹೋಗಿದ್ದಾರೆ.
ನಿಮ್ಮ ಗ್ರಾಮಕ್ಕೆ ಮರಿಬಸವಲಿಂಗ ಸ್ವಾಮೀಜಿ ಅವರು ಬಂದಿದ್ದಾರೆಂದು ಅವರ ಪೂಜೆಗೆ ದೇವಸ್ಥಾನ ನಿರ್ಮಿಸುವಂತೆ ಸಲಹೆ ನೀಡಿದ್ದರಿಂದ ಗ್ರಾಮದ ಹಿರಿಯ ಮುಖಂಡರೆಲ್ಲಾ ಸೇರಿ ಶ್ರೀ ಉಟಕನೂರು ಮರಿಬಸವಲಿಂಗ ಸ್ವಾಮಿಯ ಗದ್ದುಗೆ ನಿರ್ಮಿಸಿ ಪೂಜೆ ಸಲ್ಲಿಸುತ್ತಾ ಬಂದಾಗಿನಿಂದ ಹಾವುಗಳು ಕಾಣುವುದು ಕಡಿಮೆಯಾಗಿದೆ ಎಂಬ ಪ್ರತೀತಿಯಿದೆ.
ಕಾಲಾನಂತರ ದೇವಸ್ಥಾನ ನಿರ್ಮಿಸಿ ಮೂರ್ತಿಯನ್ನು ಪ್ರತಿಷ್ಟಾಪಿಸಿ ಪೂಜೆ ಸಲ್ಲಿಸುತ್ತಾ ಬರಲಾಗುತ್ತಿದ್ದು ಗ್ರಾಮದ ಸುಖ ಶಾಂತಿಯ ಪ್ರತೀಕವಾಗಿರುವ ಮರಿಬಸವ ತಾತನವರ ರಥೋತ್ಸವ ಪ್ರತಿವರ್ಷ ಹಂಪಿ ರಥೋತ್ಸವವು ಜರುಗುವವ ದವನದ ಹುಣ್ಣಿಮೆಯಂದೇ ಜರುಗಲಿದೆ.
ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ಭಸ್ಮಾರ್ಚನೆ, ಬಿಲ್ವಾರ್ಚನೆಗೈದು ವಿವಿಧ ಫಲಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ಮಾಡಿ ಪೂಜೆ ಸಲ್ಲಿಸಲಾಯಿತು.
ಗ್ರಾಮದ ಎಲ್ಲಾ ಭಕ್ತಾದಿಗಳು ಕಾಯಿ, ಕರ್ಪೂರ, ಎಡೆ ನೈವೇದ್ಯ ಸಲ್ಲಿಸಿ ತಮ್ಮ ಹರಕೆಗಳನ್ನು ಹರ್ಪಿಸಿದರು.
ಸಾಯಂಕಾಲದಂದು ಜರುಗಿದ ರಥೋತ್ಸವಕ್ಕೂ ಮುನ್ನ ಯುವಕರು ಬೃಹತ್ ಹಾರಗಳನ್ನು ಟ್ರ್ಯಾಕ್ಟರ್ ನಲ್ಲಿ ಮೆರವಣೆಗೆ ಮೂಲಕ ತಂದು ರಥಕ್ಕೆ ಸಮರ್ಪಿಸಿದರು.
ಸಾಯಂಕಾಲ ಎಲ್ಲಾ ಭಕ್ತಾದಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿದ ರಥೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಗಳಾದ ಸಿಂಗಾಪುರ, ಹೆರಕಲು, ಉಡೇಗೋಳ, ನಡವಿ, ತೆಕ್ಕಲಕೋಟೆ, ಹಳೇಕೋಟೆ, ಹೆರಕಲ್, ಕೆಂಚನಗುಡ್ಡದಿಂದಲೂ ಭಕ್ತರು ಭಾಗವಹಿಸಿ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ವರದಿ : ಶ್ರೀನಿವಾಸ ನಾಯ್ಕ