ಹಾವೇರಿ : ಭಾರತದಲ್ಲಿ ಇರುವಂತಹ ಮುಸ್ಲಿಂರು ಕೂಡ ಹಿಂದುಗಳೇ. ಶ್ರೀಲಂಕಾ, ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿರುವವರು ಸಹ ಹಿಂದೂಗಳೇ. ಹಿಂದೂ ಅಂದರೆ ಶುದ್ಧವಾದ ಜೀವನ ಪದ್ಧತಿ ಅಂತ ಸುಪ್ರೀಂ ಕೋರ್ಟ್ ಹೇಳಿದೆ. ಹಿಂದೂ ಅಂದರೆ ಸತ್ಯ ಹಾಗೂ ಸನಾತನ ಎಂದು ಹರಿಹರದ ಪಂಚಮಸಾಲಿ ಪೀಠಾಧಿಪತಿ ವಚನಾನಂದ ಶ್ರೀ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇಂದು ಹಾವೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿರುವ ಪ್ರತಿಯೊಬ್ಬರು ಕೂಡ ಹಿಂದೂಗಳೇ. ದೇಶ ಹಾಗೂ ಸಮುದಾಯ ಅಂತಾ ಬಂದಾಗ ನಾವೆಲ್ಲಾ ಹಿಂದೂಗಳು. ಬೇರೆ ಧರ್ಮಗಳು ಹುಟ್ಟುವ ಮೊದಲೇ ಇದ್ದಿದ್ದೇ ಹಿಂದೂ ಧರ್ಮ. ಜಗತ್ತಿನ ಸಿದ್ಧಾಂತ ತತ್ವಗಳಿಗೆ ಮೂಲವೇ ಹಿಂದೂ ಧರ್ಮವಾಗಿದೆ ಎಂದು ತಿಳಿಸಿದರು.
ಇನ್ನೂ ಲಿಂಗಾಯತ ಪ್ರತ್ಯೇಕ ಧರ್ಮದ ಕುರಿತು ಮಾತನಾಡಿದ ಅವರು, ನಾವು ಒಂದಾಗದೇ ಪ್ರತ್ಯೇಕ ಧರ್ಮ ಮಾಡಲು ಹೇಗೆ ಸಾಧ್ಯವಿದೆ? ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಮಾನ್ಯತೆ ಯಾಕೆ ಸಿಕ್ಕಿಲ್ಲ? ಕೆಲವು ಸ್ವಾಮೀಜಿಗಳು ನಾವು ಹಿಂದೂಗಳಲ್ಲ ಅಂತ ಹೇಳ್ತಾರಲ್ವಾ? ಹಾಗೇ ಹೇಳುವ ಸ್ವಾಮೀಜಿಗಳಿಗೆ ಸರ್ಟಿಫಿಕೇಟ್ ತೋರಿಸಲು ಹೇಳಿ. ಬಸವಣ್ಣ ಬ್ರಾಹ್ಮಣ, ಬ್ರಾಹ್ಮಣರಿಗೆ ನಾವು ಕೃತಜ್ಞರಾಗಿ ಇರಬೇಕು. ನಮ್ಮನ್ನು ಉದ್ಧಾರ ಮಾಡೋಕೂ ಬ್ರಾಹ್ಮಣರು ಬರಬೇಕಾಯಿತು. ಇಲ್ಲದಿದ್ದರೆ ಶೂದ್ರರಾಗಿ ಇರಬೇಕಾಗುತಿತ್ತು ಎಂದರು.
ಲಿಂಗಾಯತ ಇರಲಿ ವೀರಶೈವ ಇರಲಿ ಎಲ್ಲರೂ ಒಂದಾಗಿ ಹೋಗಬೇಕು. ಕೆಲವರ ಜಾತಿ ಪ್ರಮಾಣಪತ್ರದಲ್ಲಿ ಹಿಂದೂ ಬೌದ್ಧ ಅಂತಾ ಇದೆ. ಹಿಂದೂ ಜೈನ ಅಂತ ಇದೆ, ಅದೇ ರೀತಿ ಹಿಂದೂ ಲಿಂಗಾಯತವೂ ಇದೆ. ವೀರಶೈವ ಹಾಗೂ ಲಿಂಗಾಯತರು ಎಲ್ಲರೂ ಮೊದಲು ಒಗ್ಗಟ್ಟಾಗಬೇಕು ಎಂದು ಅವರು ಕರೆ ನೀಡಿದರು.