ತುರುವೇಕೆರೆ : ತಾಲ್ಲೂಕಿನ ದಂಡಿನಶಿವರ ಹೋಬಳಿಯ ಸಂಪಿಗೆ ಗ್ರಾಮದ ಶ್ರೀ ಶ್ರೀನಿವಾಸ ಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಮಹೋತ್ಸವವನ್ನು ಡಿಸೆಂಬರ್ 30 ರಂದು ಹಮ್ಮಿಕೊಳ್ಳಲಾಗಿದ್ದು, ಶ್ರೀನಿವಾಸ ದೇವರಿಗೆ ಹಾಗೂ ಅಮ್ಮನವರಿಗೆ ವಿಶೇಷ ನೂತನ ವಜ್ರಾಂಗಿ ಅಲಂಕಾರ ಏರ್ಪಡಿಸಲಾಗಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಹರೀಶ್ ತಿಳಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ವರ್ಷವೂ ವೈಕುಂಠ ಏಕಾದಶಿ ಮಹೋತ್ಸವವನ್ನು ಭಕ್ತಾಧಿಗಳ ಸಹಕಾರದೊಂದಿಗೆ ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಬೆಳಿಗ್ಗೆ 5 ಗಂಟೆಗೆ ಸುಪ್ರಭಾತ, ಗೋಪೂಜೆ, ಗೋಗ್ರಾಸ, ಪ್ರಾಕಾರ ಉತ್ಸವ, ವೈಕುಂಠ ದ್ವಾರ ಪ್ರವೇಶ, ಉಯ್ಯಾಲೆ ಸೇವೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಸಲಾಗುವುದು. ಮಧ್ಯಾಹ್ನ 2 ಗಂಟೆಗೆ ವೇದ ಪಾರಾಯಣ, ಸಪ್ತದ್ವಾರಗಳ ಮೂಲಕ ಸ್ವಾಮಿಯವರ ದಿವ್ಯದರ್ಶನ, ಅಷ್ಟಾವಧಾನ ಸೇವೆ ನಡೆಯಲಿದೆ ಎಂದರು.
ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ನಿರಂತರವಾಗಿ ದೇವರ ದರ್ಶನಕ್ಕೆ ಹಾಗೂ ಮಧ್ಯಾಹ್ನ 2 ಗಂಟೆಯ ನಂತರ ಸಪ್ತದ್ವಾರದ ಮೂಲಕ ಸ್ವಾಮಿಯವರ ದಿವ್ಯದರ್ಶನ ಪಡೆಯಲು ಭಕ್ತಾಧಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಬೆಳಿಗ್ಗೆಯಿಂದ ನಿರಂತರ ಭಜನಾ ಕಾರ್ಯಕ್ರಮ, ರಾತ್ರಿ 9 ಗಂಟೆಗೆ ಸುಂಕಾಪುರ ಗ್ರಾಮದ ಶ್ರೀ ಕೆಂಚರಾಯಸ್ವಾಮಿಯವರ ಉತ್ಸವ, ಸಾಮೂಹಿಕ ಶಂಖ ಉದ್ಘೋಷ ನಡೆಯಲಿದೆ. ತುಮಕೂರಿನ ಶ್ರೀ ಸಾಯಿರಾಮನ್ ನೃತ್ಯ ಕೇಂದ್ರದಿಂದ ವಿಶೇಷ ಶ್ರೀ ವೆಂಕಟೇಶ್ವರ ಕಲ್ಯಾಣ ಪ್ರಸ್ತುತಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಇದೇ ಸಂದರ್ಭದಲ್ಲಿ ದಂಡಿನಶಿವರ ಹೋಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಯನ್ನು ಸನ್ಮಾನಿಸಲಾಗುವುದು ಎಂದರು.

ಭಕ್ತಾಧಿಗಳು ಸ್ವಯಂಪ್ರೇರಿತರಾಗಿ ವೇದಪಾರಾಯಣ, ಸಹಸ್ರನಾಮ, ಭಜನೆ ಮುಂತಾದ ಸತ್ಸಂಗ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾಧಿಗಳು ಸಂಪಿಗೆಗೆ ವೈಕುಂಠ ಏಕಾದಶಿ ಕಾರ್ಯಕ್ರಮಕ್ಕೆ ಆಗಮಿಸಲು ನಿಟ್ಟೂರು, ತುರುವೇಕೆರೆಯಿಂದ ಬಸ್ ಹಾಗೂ ಆಟೋ ವ್ಯವಸ್ಥೆ ಇದೆ. ದೇವಸ್ಥಾನಕ್ಕೆ ಬರುವ ಎಲ್ಲಾ ಭಕ್ತರಿಗೆ ನಿರಂತರ ಪ್ರಸಾದ ವಿನಿಯೋಗ ವ್ಯವಸ್ಥೆಯನ್ನು ಸಹ ಮಾಡಲಾಗಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು.
ಈ ಸಂದರ್ಭದಲ್ಲಿ ಶ್ರೀ ಬೇಟೇರಾಯಸ್ವಾಮಿ ದೇವಸ್ಥಾನದ ಮಾಜಿ ಕನ್ವೀನರ್ ಟಿ.ಆರ್.ಶ್ರೀನಿವಾಸ್(ಬ್ಯಾಂಕ್), ಪ್ರಚಾರ ಸಮಿತಿ ಸದಸ್ಯರಾದ ಪ್ರಭು, ಯಶವಂತ್, ಪ್ರಸಾದ್, ಶ್ರೀನಿವಾಸ್, ಗೌತಮ್, ಗಗನ್, ಭಾಸ್ಕರ್, ಮನು, ಬಾಲಾಜಿ, ನಾಗರಾಜ್, ರಾಜೇಶ್, ಹರೀಶ್, ಶ್ರೀಧರ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




