ತುರುವೇಕೆರೆ: ಪಟ್ಟಣದ ಬಸವೇಶ್ವರ ನಗರದಲ್ಲಿರುವ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯವರ ದೇವಸ್ಥಾನದಲ್ಲಿ ಡಿಸೆಂಬರ್ 30 ರಂದು ವೈಕುಂಠ ಏಕಾದಶಿ ಮತ್ತು ಸಪ್ತದ್ವಾರ ಪ್ರವೇಶ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಭಾವಸಾರ ಕ್ಷತ್ರಿಯ ದೈವ ಮಂಡಳಿ ಅಧ್ಯಕ್ಷ ಟಿ.ಎನ್. ರಮೇಶ್ ಬಾಬುರಾವ್ ತಿಳಿಸಿದರು.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷವೂ ವೈಕುಂಠ ಏಕಾದಶಿ ಮತ್ತು ಸಪ್ತದ್ವಾರ ಪ್ರವೇಶ ಕಾರ್ಯಕ್ರಮವನ್ನು ದೈವ ಮಂಡಳಿ ಹಾಗೂ ಭಕ್ತರ ಸಹಕಾರದಿಂದ ಅದ್ದೂರಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ವರ್ಷವೂ ಡಿಸೆಂಬರ್ 30 ರಂದು ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮ, ಸಪ್ತದ್ವಾರ ಪ್ರವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಡಿಸೆಂಬರ್ 30 ರಂದು ಬೆಳಿಗ್ಗೆ 6 ಗಂಟೆಗೆ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಯವರಿಗೆ ಪಂಚಾಮೃತ ಅಭಿಷೇಕ, ಬೆಳ್ಳಿ ಕವಚಧಾರಣೆ, ಮಹಾಮಂಗಳಾರತಿ ನೆರವೇರಿಸಿ ಭಕ್ತಾಧಿಗಳಿಗೆ ಲಾಡು ಪ್ರಸಾದ ವಿತರಿಸಲಾಗುವುದು. ಈ ದಿನ ಬೆಳಿಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ನಿರಂತರ ವಿವಿಧ ಭಜನಾ ಮಂಡಳಿಗಳಿಂದ ಭಜನೆ, ಭಕ್ತಿಗೀತೆ ಕಾರ್ಯಕ್ರಮ, ನಡೆಯಲಿದೆ. ಬೆಳಿಗ್ಗೆ 6 ಗಂಟೆಯಿಂದಲೇ ಶ್ರೀ ಸ್ವಾಮಿಯವರ ತೂಗುಯ್ಯಾಲೆ ಪ್ರವೇಶ ದರ್ಶನವಿರುತ್ತದೆ. ಸಂಜೆ 6.30 ಕ್ಕೆ ಭಕ್ತಿಸುಧಾ ಮಿತ್ರ ಮಂಡಳಿಯಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಈ ಎಲ್ಲಾ ಕಾರ್ಯಕ್ರಮದಲ್ಲಿ ತಾಲೂಕಿನ ನಾಗರೀಕರು ಪಾಲ್ಗೊಂಡು ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಕಾರ್ಯಕಾರಿ ಮಂಡಳಿಯ ಕಾರ್ಯದರ್ಶಿ ಶಿವಕುಮಾರ್, ಖಜಾಂಚಿ ತೇಜಸ್, ಸದಸ್ಯರಾದ ನರಸಿಂಹಸ್ವಾಮಿ, ಧರ್ಮೋಜಿರಾವ್, ಸುರೇಶ್ ರಾವ್, ಅಶೋಕ್ ಬಾಬುರಾವ್, ಶ್ರೀಧರ್ ರಾವ್, ಸುಂದರ್ ರಾವ್, ಮಂಜುನಾಥ ರಾವ್, ರಾಘವೇಂದ್ರ ರಾವ್, ಸುನಿಲ್ ಕುಮಾರ್, ಹರೀಶ್ ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




