ಇಳಕಲ್:- ನಂದವಾಡಗಿ ೧೮: ಬಾಗಲಕೋಟೆ ಜಿಲ್ಲೆಯ ಹುನಗುಂದ /ಇಲಕಲ್ ತಾಲೂಕಿನ ಸರಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂದವಾಡಗಿಯಲ್ಲಿ ಆಗಸ್ಟ್ ತಿಂಗಳಿನ ಸಂಭ್ರಮ ಶನಿವಾರದ ಚಟುವಟಿಕೆಗಳು ಜರುಗಿದವು. ಮಕ್ಕಳ ವಿಶಿಷ್ಟ ಕೌಶಲ ಅಭಿವೃದ್ಧಿಗಾಗಿ ಅರಿವು ಅನುಭವ ಅವಲೋಕನಗಳ ಮೂಲಕ ಜ್ಞಾನ ಪಡೆಯುವುದು ಇದರ ಮೂಲ ಉದ್ದೇಶ. ಶಾಲೆಯ ಹೊರಗಿನ ಅನುಭವಗಳನ್ನು ಚಟುವಟಿಕೆ ಗಳ ಮೂಲಕ ಒದಗಿಸಲು ವೇದಿಕೆಯಾಗಿದೆ.
ಪ್ರತಿ ತಿಂಗಳ ಮೂರನೇ ಶನಿವಾರವನ್ನು ಬ್ಯಾಗ ರಹಿತ ದಿನ ಎಂದು ಆಚರಿಸಲು ರಾಷ್ಟ್ರೀಯ ಶಿಕ್ಷಣ ನೀತಿ ೨೦೨0 ರ ಶಿಫಾರಸ್ಸು ಮಾಡಿದೆ. ವರ್ಷದಲ್ಲಿ ಹತ್ತು ದಿನ ವಿವಿಧ ವಿಷಯಗಳ ಮೇಲೆ ಮಕ್ಕಳಿಗಾಗಿಯೇ ಮಕ್ಕಳಿಂದ ಸನ್ನಿವೇಶ ಸೃಷ್ಟಿಸಿ ಕೌಶಲ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯ ಇಲ್ಲಿ ನಡೆಯುತ್ತಿದೆ. ಈ ತಿಂಗಳಿನ ಆಧುನಿಕ ತಂತ್ರಜ್ಞಾನ ಸಾಧನಗಳು ಮತ್ತು ಅಂತರ್ಜಾಲದ ಸುರಕ್ಷಿತ ಬಳಕೆ ವಿಷಯದ ಕುರಿತು ಚಟುವಟಿಕೆಗಳು ನಡೆದವು.
ನಲಿ ಕಲಿ, ನಾಲ್ಕು ಮತ್ತು ಐದು ಹಾಗೂ ಆರು ಮತ್ತು ಏಳು ತರಗತಿಯ ಮಕ್ಕಳನ್ನು ವಿವಿಧ ಗುಂಪುಗಳನ್ನಾಗಿ ಮಾಡಿ ನೀವೇನು ಬಲ್ಲಿರಿ? ಬನ್ನಿ ಚಿತ್ರ ಬಿಡಿಸೋಣ, ನಟಿಸು – ಕಲಿ ಚಟುವಟಿಕೆಗಳನ್ನು ನಿರ್ವಹಿಸಿದರು. ಮಕ್ಕಳು ಉತ್ತಮವಾಗಿ ಭಾಗವಹಿಸಿ ತಮ್ಮ ಅಭಿಪ್ರಾಯ, ಕೌಶಲವನ್ನು ಹಂಚಿಕೊಂಡರು. ಸಂಭ್ರಮ ಶನಿವಾರದ ವಿವಿಧ ಚಟುವಟಿಕೆಗಳ ಮೂಲಕ ಜ್ಞಾನವನ್ನು ಪಡೆದು, ಕಲಿಕೆ ಹಾಗೂ ಬದುಕಿನಲ್ಲಿ ಅನ್ವಯಿಸಿಕೊಳ್ಳಬೇಕು ಎಂದು ಮಾರ್ಗದರ್ಶಿ ಶಿಕ್ಷಕರು ಅಭಿಪ್ರಾಯಪಟ್ಟರು.
ಸಂಭ್ರಮ ಶನಿವಾರ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರುಮಾತೆ ಶ್ರೀಮತಿ ವಿ ಬಿ ಕುಂಬಾರ, ಮಾರ್ಗದರ್ಶಿ ಶಿಕ್ಷಕರಾದ ಶ್ರೀಮತಿ ಜ್ಯೋತಿ, ಶ್ರೀಮತಿ ಜಿ ಆರ್ ನದಾಫ್, ಶ್ರೀ ಶಿವಾನಂದ ಬಿ, ಶ್ರೀ ಬಸವರಾಜ ಬಲಕುಂದಿ, ಶ್ರೀ ಚಂದ್ರಶೇಖರ ಹುತಗಣ್ಣ, ಕುಮಾರಿ ಅಶ್ವಿನಿ ಕಪ್ಪರದ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು. ಕೊನೆಯಲ್ಲಿ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಯಿತು.
ವರದಿ:- ದಾವಲ್ ಸೇಡಂ