ಸೇಡಂ: -ವಾಸವದತ್ತಾ ರೈಲು ಸಂಚಾರ ಸಮಯ ಬದಲಾವಣೆ ಸಂಬಂಧ ರೈಲ್ವೆ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ತಿಳಿಸಿರುವುದಾಗಿ ಸೇಡಂ ಜನಹಿತರಕ್ಷಣಾ ಸಮಿತಿಯ ಶಿವಕುಮಾರ ಅಪ್ಪಾಜಿ ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳೊಂದಿಗೆ ಸಂಪರ್ಕಿಸಲಾಗಿದ್ದು, ರೈಲು ಸಂಚಾರ ಸಮಯ ಬದಲಾವಣೆ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರಾಥಮಿಕ ಹಂತದ ಸಭೆ ನಡೆಸಲಾಗಿದೆ. ಸಿಕಿಂದ್ರಾಬಾದ ರೈಲ್ವೆ ಡಿಜಿಎಂ ಅವರೊಂದಿಗೂ ಚರ್ಚಿಸಲಾಗಿದ್ದು, ಸಾರ್ವಜನಿಕರಿಗೆ ರೈಲು ಸಂಚಾರದಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಪರಿಶೀಲಿಸಲು ಮುಂದಿನ ವಾರ ರೈಲ್ವೆ ಇಂಜಿನಿಯರಗಳ ತಂಡ ಸೇಡಂಗೆ ಭೇಟಿ ನೀಡಲಿದೆ ಎಂದು ತಿಳಿಸಿರುವುದಾಗಿ ಅಪ್ಪಾಜಿ ಮಾಹಿತಿ ನೀಡಿದ್ದಾರೆ.
ಪಟ್ಟಣದ ಹೃದಯಭಾಗದಿಂದ ವಾಸವದತ್ತಾ ಸಿಮೆಂಟ್ ಕಾರ್ಖಾನೆಗೆ ಹಾದುಹೋಗಿರುವ ರೈಲು ಹಳಿ ಮತ್ತು ರೈಲು ಸಂಚಾರದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಸರಕಾರಿ ಅಧಿಕಾರಿಗಳು, ರೋಗಿಗಳು ಅನುಭವಿಸುತ್ತಿರುವ ಸಮಸ್ಯೆ ಕುರಿತು ಕೇಂದ್ರ ರೈಲ್ವೆ ಸಚಿವರಿಗೆ ಸಹಾಯಕ ಆಯುಕ್ತರ ಮೂಲಕ ಪತ್ರ ಬರೆಯಲಾಗಿತ್ತು ಜೊತೆಗೆ ಸೇಡಂನಲ್ಲಿ ನಡೆದ ಜನಸ್ಪಂಧನ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೂ ಮನವಿ ನೀಡಲಾಗಿತ್ತು. ಈ ವೇಳೆ ರೈಲು ಅಧಿಕಾರಿಗಳ ಜೊತೆ ಸಭೆ ನಡೆಸಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದರು.
ಮುಂದಿನ ವಾರ ಇಂಜಿನಿಯರಗಳ ತಂಡ ಸೇಡಂನ ವಾಸವದತ್ತಾ ರೈಲು ಹಳಿ ಸಂಚರಿಸುವ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಂತರ ಸಹಾಯಕ ಆಯುಕ್ತರ ನೇತೃತ್ವದಲ್ಲಿ ಸಭೆ ಜರುಗಲಿದೆ. ಅದಾದ ನಂತರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಯಲಿದೆ ಎಂದು ಡಿಸಿ ಮಾಹಿತಿ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಶೀಘ್ರದಲ್ಲೆ ರೈಲು ಸಂಚಾರದ ಸಮಯ ಬದಲಾಯಿಸುವ ಸಂಬಂಧ ಸೇಡಂ ಜನತೆಯ ಆಸೆಗೆ ಫಲ ದೊರೆಯುವ ನಿರೀಕ್ಷೆ ಇದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಲ್ಲದೆ ರೈಲ್ವೆ ಇಂಜಿನಿಯರಗಳು ಆಗಮಿಸಿದಾಗ ವಾಸವದತ್ತಾ ರೈಲ್ವೆ ಹಳಿಯಿಂದ ಆಗುತ್ತಿರುವ ಸಮಸ್ಯೆಯ ಬಗ್ಗೆ ಪ್ರತ್ಯಕ್ಷವಾಗಿ ಸಾರ್ವಜನಿಕರೂ ಸಹ ಮಾಹಿತಿ ನೀಡಬೇಕು ಆಗ ಮಾತ್ರ ಸಮಸ್ಯೆಯಿಂದ ಮುಕ್ತಿ ದೊರೆಯುವುದು ಎಂದು ಅವರು ಮನವಿ ಮಾಡಿದ್ದಾರೆ.
ವರದಿ ವೆಂಕಟಪ್ಪ ಕೆ ಸುಗ್ಗಾಲ್.