ತುರುವೇಕೆರೆ : ತಾಲೂಕಿನ ಅರೆಮಲ್ಲೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಭಾರತ ಗಣರಾಜ್ಯೋತ್ಸವದ ದಿನದಂದು ವಿಶೇಷವಾಗಿ ವಿಬಿ ಜಿ ರಾಮ್ ಜಿ ವಿಶೇಷ ಸಭೆಯನ್ನು ಏರ್ಪಡಿಸಿ ಗ್ರಾಮೀಣ ಜನರಿಗೆ ಕಾಯ್ದೆಯ ಬಗ್ಗೆ ಅರಿವು ಮೂಡಿಸಲಾಯಿತು.
ಗ್ರಾಮ ಪಂಚಾಯ್ತಿ ಪಿಡಿಒ ಉಮೇಶ್ ಕಾಯ್ದೆಯ ಬಗ್ಗೆ ಮಾಹಿತಿ ನೀಡಿ ಮಾತನಾಡಿ, ಈ ಹಿಂದೆ ಇದ್ದ ಮನರೇಗಾ ಉದ್ಯೋಗ ಖಾತರಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದ್ದು, ಹೊಸದಾಗಿ ಗ್ರಾಮೀಣ ಉದ್ಯೋಗ ವ್ಯವಸ್ಥೆಯನ್ನು ತಳಮಟ್ಟದಿಂದ ಬಲಪಡಿಸುವ ಉದ್ದೇಶದಿಂದ ವಿಬಿ ಜಿ ರಾಮ್ ಜಿ (ವಿಕಸಿತ ಭಾರತ, ರೋಜ್ ಗಾರ್ ಮತ್ತು ಆಜೀವಿಕ ಮಿಷನ್ (ಗ್ರಾಮೀಣ) ಹೆಸರಿನಲ್ಲಿ ಹೊಸ ಕಾಯ್ದೆಯನ್ನು ಜಾರಿಗೆ ತಂದಿದೆ ಎಂದರು.
ಗ್ರಾಮೀಣ ಕುಟುಂಬಗಳಿಗೆ ವಾರ್ಷಿಕ ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಮೂಲಕ ಆರ್ಥಿಕ ಭದ್ರತೆಯನ್ನು ಬಲಪಡಿಸುವುದು ಹಾಗೂ ಕೇವಲ ಗುಂಡಿ ತೆಗೆಯಲು, ಕಾರ್ಮಿಕರಿಗೆ ಕೂಲಿ ನೀಡುವುದಕ್ಕೆ ಸೀಮಿತವಾಗದೆ ಜಲಭದ್ರತೆ, ಗ್ರಾಮೀಣ ರಸ್ತೆ, ಜೀವನೋಪಾಯಕ್ಕೆ ಅಗತ್ಯವಾದ ಗೋದಾಮುಗಳಂತಹ ಶಾಶ್ವತ ಆಸ್ತಿಗಳ ಸೃಜನೆಗೂ ಈ ಯೋಜನೆ ಅವಕಾಶ ಕಲ್ಪಿಸಿದೆ. ರೈತರಿಗೆ ಭಿತ್ತನೆ ಹಾಗೂ ಸುಗ್ಗಿ ಕಾಲದಲ್ಲಿ ಕೆಲಸಗಾರರ ಕೊರತೆಯಾಗದಂತೆ ತಡೆಯಲು, ಕೃಷಿ ಅವಧಿಯಲ್ಲಿ ವರ್ಷಕ್ಕೆ ಒಟ್ಟು 60 ದಿನಗಳ ಕಾಲ ಯೋಜನೆಯ ಕಾಮಗಾರಿಗಳನ್ನು ಸ್ಥಗಿತಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಕ್ಕೆ ನೀಡಿದೆ. ಈ ಯೋಜನೆಗೆ ಕೇಂದ್ರ ಸರ್ಕಾರ ಶೇ. 60 ಹಾಗೂ ರಾಜ್ಯ ಸರ್ಕಾರ ಶೇ.40 ಅನುಪಾತದಲ್ಲಿ ವೆಚ್ಚ ಹಂಚಿಕೆ ಮಾಡುತ್ತದೆ ಎಂದರು.
ಯೋಜನೆಯಲ್ಲಿ ಪಾರದರ್ಶಕತೆ ಯರಲು ಕಾರ್ಮಿಕರ ಹಾಜರಾತಿಗೆ ಬಯೋಮೆಟ್ರಿಕ್ ವ್ಯವಸ್ಥೆ, ಕೆಲಸದ ಸ್ಥಳ ನಿಗಾ ಇಡಲು ಜಿಪಿಎಸ್ ಮತ್ತು ಅಕ್ರಮಗಳನ್ನು ಪಚ್ಚೆಹಚುಲು ಕೃತಕ ಬಿದ್ದಿಮತ್ತೆ ತಂತ್ರಜ್ಞಾನವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ವಿಬಿ ಜಿ ರಾಮ್ ಜಿ ಯೋಜನೆಯಲ್ಲಿ ಅಕ್ರಮ ತಡೆಗಟ್ಟಲು ಸಹಾಯಕವಾಗಿದೆ. ಅರ್ಹ ಕಾರ್ಮಿಕರಿಗೆ ಉದ್ಯೋಗ ದೊರೆಯುವ ಜೊತೆಗೆ ಕೂಲಿ ಸಹ ಪಾವತಿಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಭಾರತಿ ತಿಮ್ಮೇಗೌಡ, ಉಪಾಧ್ಯಕ್ಷೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷರೂ, ಹಾಲಿ ಸದಸ್ಯರಾದ ಕೆ.ಎಲ್.ರಾಜಶೇಖರ್, ಆರ್.ಶಿವಣ್ಣ, ಹೇಮಚಂದ್ರ, ಕಾರ್ಯದರ್ಶಿ ಜಯಣ್ಣ ಸೇರಿದಂತೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ನಾಗರೀಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




